ಸಿಬಿಐ ಕಚ್ಚಾಟ ಪ್ರಧಾನಿ ನರೇಂದ್ರ ಮೋದಿ ನಿಭಾಯಿಸಿದ್ದು ಹೇಗೆ?! ಜನರ ಮೆಚ್ಚುಗೆಗೆ ಪಾತ್ರವಾದ ಪ್ರಧಾನಿ ಮೋದಿ ತುರ್ತು ನಿರ್ಣಯಗಳು! ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಮೋದಿ! ತ್ವರಿತವಾಗಿ ಸಿಬಿಐಗೆ ಹಂಗಾಮಿ ನಿರ್ದೇಶಕರನ್ನು ನೇಮಿಸಿದ ಪ್ರಧಾನಿ! ಭ್ರಷ್ಟಾಚಾರ ಸಹಿಸಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ ಕೇಂದ್ರ

ಬೆಂಗಳೂರು(ಅ.24): ಸಿಬಿಐ ಅಂತರ್ಯುದ್ಧ ದೇಶದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ. ದೇಶದ ಉನ್ನತ ತನಿಖಾ ಸಂಸ್ಥೆಯ ಉನ್ನತ ಅಧಿಕಾರಿಗಳೇ ಪರಸ್ಪರ ಭ್ರಷ್ಟಾಚಾರ ಆರೋಪ ಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳನ್ನು ಈಗಾಗಲೇ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಅಲ್ಲದೇ ಎಂ ನಾಗೇಶ್ವರ್ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಪ್ರಧಾನಿ ಕಾರ್ಯಾಲಯ ಈ ಕುರಿತು ತ್ವರಿತ ಆದೇಶ ಹೊರಡಿಸಿದೆ.

ಈ ಮಧ್ಯೆ ಸಿಬಿಐ ಆಂತರಿಕ ಕಚ್ಚಾಟಕ್ಕೆ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರತ್ತ ಬೊಟ್ಟು ಮಾಡುತ್ತಿವೆ. ತಮ್ಮ ಲಾಭಕ್ಕಾಗಿ ಪ್ರಧಾನಿ ಮೋದಿ ಸಿಬಿಐ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.

ಇವೆಲ್ಲಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ರಫೆಲ್ ಒಪ್ಪಂದದ ಕುರಿತು ತನಿಖೆ ನಡೆಸಲು ಅಲೋಕ್ ವರ್ಮಾ ಉತ್ಸುಕರಾಗಿದ್ದೇ ಅವರಿಗೆ ಮುಳುವಾದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದೆ.

ಆದರೆ ಸಿಬಿಐನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಭ್ರಷ್ಟಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಶೂನ್ಯ ಸಹಿಷ್ಣುತೆ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಕಾರಣ ಸಿಬಿಐ ಉನ್ನತ ಅಧಿಕಾರಿಗಳ ಕಚ್ಚಾಟ ಹೆಚ್ಚಾಗುತ್ತಿದ್ದಂತೇ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಅಧಿಕಾರಿಗಳನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿದ್ದರು. ಅಲ್ಲದೇ ಇಬ್ಬರೂ ಅಧಿಕಾರಿಗಳಿಗೆ ಕಡ್ಡಾಯ ರಜೆ ಘೋಷಿಸಿ ಹಂಗಾಮಿ ನಿರ್ದೇಶಕರನ್ನು ಕೂಡ ಪ್ರಧಾನಿ ಕಚೇರಿ ನೇಮಿಸಿದೆ.

ಈ ಕುರಿತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಧಾನಿ ಅವರ ತುರ್ತು ನಿರ್ಧಾರಗಳು ಭ್ರಷ್ಟಾಚಾರ ಕುರಿತ ಅವರ ಶೂನ್ಯ ಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಸಿಬಿಐ ನ ಇಬ್ಬರು ಉನ್ನತ ಅಧಿಕಾರಿಗಳ ಒಳಜಗಳ ಬಹಿರಂಗವಾಗುತ್ತಿದ್ದಂತೇ ಪ್ರಧಾನಿ ಮೋದಿ ಇಬ್ಬರೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಅನನ್ಯ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪ ಕೇಳಿ ಬಂದಾಗ ಉನ್ನತ ಅಧಿಕಾರಿ ಎಂಬುದನ್ನು ಗಣನೆಗೂ ತೆಗೆದುಕೊಳ್ಳದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದು, ಮೋದಿ ಆಡಳಿತದ ವೈಖರಿಗೆ ಹಿಡಿದ ಕನ್ನಡಿ ಎಂದು ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.