ನವದೆಹಲಿ(ಜು.03): ಮಹತ್ವದ ಬೆಳವಣಿಗೆಯೊಂದರಲ್ಲಿ ಎಐಸಿಸಿ ಅಧ್ಯಕ್ಷ  ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿರುವ ಕಾಂಗ್ರೆಸ್, ಪಕ್ಷದ ಹಿರಿಯ ನಾಯಕ ಮೋತಿಲಾಲ್ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ಕಾಂಗ್ರೆಸ್ ನಾಯಕರ ತೀವ್ರ ಒತ್ತಡದ ನಡುವೆಯೂ ರಾಜೀನಾಮೆ ಹಿಂಪಡೆಯಲು ನಿರಾಕರಿಸಿರುವ ರಾಹುಲ್ ಗಾಂಧಿ, ಈ ಕುರಿತು ನಾಲ್ಕು ಪಟುಗಳ ಭಾವನಾತ್ಮಕ ಪತ್ರ ಬರೆದಿದ್ದಾರೆ. ಶೀಘ್ರದಲ್ಲೇ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕವಾಗಲಿ ಎಂದು ತಮ್ಮ ಪತ್ರದಲ್ಲಿ ರಾಹುಲ್ ಆಗ್ರಹಿಸಿದ್ದರು.

ಅದರಂತೆ ರಾಹುಲ್ ರಾಜೀನಾಮೆಯನ್ನು ಅಧಿಕೃತವಾಗಿ ಸ್ವೀಕರಿಸಿರುವ ಕಾಂಗ್ರೆಸ್, 90 ವರ್ಷದ ಹಿರಿಯ ನಾಯಕ ಮೋತಿಲಾಲ್ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ವಾರದೊಳಗಾಗಿ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ತಿಳಿಸಿರುವ ಕಾಂಗ್ರೆಸ್, ಅಲ್ಲಿಯವರೆಗೂ ಮೋತಿಲಾಲ್ ವೋರಾ ಪಕ್ಷದ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಮೋತಿಲಾಲ್ ವೋರಾ, ಅಪ್ಪಟ ಕಾಂಗ್ರೆಸ್ಸಿಗ ಎಂದೇ ಜನಪ್ರಿಯರಾಗಿದ್ದಾರೆ.