ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತುರ್ತು ಅಧಿಕಾರ ಚಲಾಯಿಸಿದೆ. ದೇಶದ ಎಲ್ಲಾ ತೈಲ ಸಂಸ್ಕರಣಾಗಾರಗಳು ಪೆಟ್ರೋಕೆಮಿಕಲ್ ಉತ್ಪಾದನೆ ನಿಲ್ಲಿಸಿ, ಕೇವಲ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 

ನವದೆಹಲಿ (ಮಾ.6): ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಅಡುಗೆ ಅನಿಲ (LPG) ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ತಡೆಯಲು ಭಾರತ ಸರ್ಕಾರವು 'ತುರ್ತು ಅಧಿಕಾರ'ವನ್ನು ಚಲಾಯಿಸಿದೆ. ದೇಶದ ಎಲ್ಲಾ ತೈಲ ಸಂಸ್ಕರಣಾಗಾರಗಳು ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರದ ಆದೇಶದಲ್ಲಿ ಏನಿದೆ?

ಗುರುವಾರ ತಡರಾತ್ರಿ ತುರ್ತು ಅಧಿಕಾರದ ಆದೇಶವನ್ನು ಹೊರಡಿಸಲಾಗಿದೆ. ಅದರಂಯತೆ ಎಲ್ಲಾ ತೈಲ ಸಂಸ್ಕರಣಾಗಾರಗಳು ತಮ್ಮಲ್ಲಿ ಲಭ್ಯವಿರುವ ಪ್ರೋಪೇನ್ (Propane) ಮತ್ತು ಬ್ಯುಟೇನ್ (Butane) ಅನಿಲಗಳನ್ನು ಕೇವಲ ಎಲ್‌ಪಿಜಿ ಉತ್ಪಾದನೆಗಾಗಿಯೇ ಬಳಸಬೇಕು. ಪೆಟ್ರೋಕೆಮಿಕಲ್ ಉತ್ಪನ್ನಗಳ ತಯಾರಿಕೆಗೆ ಈ ಅನಿಲಗಳನ್ನು ಬಳಸದಂತೆ ಅಥವಾ ಬೇರೆಡೆಗೆ ವರ್ಗಾಯಿಸದಂತೆ ಸೂಚಿಸಲಾಗಿದೆ. ಉತ್ಪಾದಿಸಿದ ಎಲ್‌ಪಿಜಿಯನ್ನು ಮನೆಮನೆಗೆ ವಿತರಿಸಲು ಸರ್ಕಾರಿ ಸ್ವಾಮ್ಯದ ಐಒಸಿ (IOC), ಎಚ್‌ಪಿಸಿ (HPC) ಮತ್ತು ಬಿಪಿಸಿ (BPC) ಸಂಸ್ಥೆಗಳಿಗೆ ಒದಗಿಸಬೇಕು.

ಮಧ್ಯಪ್ರಾಚ್ಯದ ಮೇಲೆ ಅವಲಂಬನೆ

ವಿಶ್ವದ ಎರಡನೇ ಅತಿದೊಡ್ಡ ಎಲ್‌ಪಿಜಿ ಆಮದು ದೇಶವಾಗಿರುವ ಭಾರತ, ಕಳೆದ ವರ್ಷ 33.15 ಮಿಲಿಯನ್ ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಬಳಕೆ ಮಾಡಿದೆ. ಭಾರತದ ಒಟ್ಟು ಬಳಕೆಯ ಪೈಕಿ ಮೂರನೇ ಎರಡರಷ್ಟು ಭಾಗ ಆಮದಿನಿಂದಲೇ ಪೂರೈಕೆಯಾಗುತ್ತದೆ. ಇದರಲ್ಲಿ ಶೇ. 85 ರಿಂದ 90 ರಷ್ಟು ಭಾಗ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೇ ಬರುತ್ತದೆ. ಪ್ರಸ್ತುತ ಅಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ಕಂಪನಿಗಳ ಲಾಭದ ಮೇಲೆ ಪರಿಣಾಮ

ಸಾಮಾನ್ಯವಾಗಿ ಪ್ರೋಪೇನ್ ಮತ್ತು ಬ್ಯುಟೇನ್ ಅನಿಲಗಳನ್ನು ಪೆಟ್ರೋಕೆಮಿಕಲ್ ಉತ್ಪನ್ನಗಳಾದ ಪಾಲಿಪ್ರೊಪಿಲೀನ್ ಮತ್ತು ಆಲ್ಕೈಲೇಟ್‌ಗಳ ತಯಾರಿಕೆಗೆ ಬಳಸಲಾಗುತ್ತದೆ. ಇವುಗಳಿಗೆ ಎಲ್‌ಪಿಜಿಗಿಂತ ಹೆಚ್ಚಿನ ಬೆಲೆ ಸಿಗುವುದರಿಂದ ಕಂಪನಿಗಳಿಗೆ ಲಾಭ ಹೆಚ್ಚು. ಆದರೆ, ಸರ್ಕಾರದ ಈ ಆದೇಶದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಖಾಸಗಿ ಕಂಪನಿಗಳ ಲಾಭದ ಮೇಲೆ (Margins) ಪರಿಣಾಮ ಬೀರಲಿದೆ. ವಿಶೇಷವಾಗಿ ಪೆಟ್ರೋಲ್ ಮಿಶ್ರಣಕ್ಕೆ ಬಳಸುವ 'ಆಲ್ಕೈಲೇಟ್' ರಫ್ತಿನ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆಯಿದೆ.

ಗ್ರಾಹಕರಿಗೆ ಸಮಾಧಾನದ ಸುದ್ದಿ

ದೇಶದಲ್ಲಿ ಪ್ರಸ್ತುತ ಸುಮಾರು 33.2 ಕೋಟಿ ಸಕ್ರಿಯ ಎಲ್‌ಪಿಜಿ ಗ್ರಾಹಕರಿದ್ದಾರೆ. ಹಬ್ಬದ ಸೀಸನ್ ಮತ್ತು ಬೇಸಿಗೆಯ ಸಂದರ್ಭದಲ್ಲಿ ಅನಿಲದ ಬೇಡಿಕೆ ಹೆಚ್ಚಿರುತ್ತದೆ. ಪೂರೈಕೆಯಲ್ಲಿ ಸಣ್ಣ ವ್ಯತ್ಯಯವಾದರೂ ಬೆಲೆ ಏರಿಕೆ ಅಥವಾ ಕೃತಕ ಅಭಾವ ಸೃಷ್ಟಿಯಾಗಬಹುದು. ಈ ಎಲ್ಲಾ ಅಪಾಯಗಳನ್ನು ತಪ್ಪಿಸಲು ಸರ್ಕಾರ ಈ ತುರ್ತು ಕ್ರಮಕ್ಕೆ ಮುಂದಾಗಿದೆ.