ಬೆಂಗಳೂರು :  ಹೆಣ್ಣು ನವಜಾತ ಶಿಶುವನ್ನು ತಾಯಿ ಆಸ್ಪತ್ರೆಯಲ್ಲೇ ಬಿಟ್ಟು ಹೋಗಿರುವ ಘಟನೆ ನಡೆದಿದ್ದು, ವಿ.ವಿ.ಪುರ ಪೊಲೀಸರು ಮಗುವಿನ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಗೌರಿಬಿದನೂರು ಮೂಲದ ಲಕ್ಷ್ಮೇದೇವಿ ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ.

ಏ.25ರಂದು ಲಕ್ಷ್ಮೇದೇವಿ ಅವರಿಗೆ ದಾಖಲಾಗಿದ್ದು, ಹೆಣ್ಣು ಮಗು ಜನಿಸಿತ್ತು. ಲಕ್ಷ್ಮೇ ದೇವಿ ಅವರ ಜತೆ ಯುವಕನೊಬ್ಬ ಬಂದಿದ್ದ, ಆತನೊಂದಿಗೆ ಮಹಿಳೆ ಹೋಗಿದ್ದಾರೆ. ಮಗು ನಿರಂತರವಾಗಿ ಅಳುತ್ತಿತ್ತು. ಆಸ್ಪತ್ರೆ ಸಿಬ್ಬಂದಿ ಪರಿಶೀಲಿಸಿದಾಗ ಮಹಿಳೆ ಮಗುವನ್ನು ಬಿಟ್ಟು ಹೋಗಿರುವುದು ತಿಳಿದಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಗುವನ್ನು ಹಸ್ತಾಂತರಿಸಲಾಗಿದೆ. ವಾಣಿ ವಿಲಾಸ್‌ ಆಸ್ಪತ್ರೆ ಅಧಿಕಾರಿ ನೀಡಿದ ದೂರಿನ ಆಧಾರ ಮೇಲೆ ವಿವಿಪುರ ಪೊಲೀಸರು ಲಕ್ಷ್ಮೇದೇವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಷ್ಮೇದೇವಿ ಆಸ್ಪತ್ರೆಗೆ ದಾಖಲಾಗುವ ಮುನ್ನ ನೀಡಿದ ಮೊಬೈಲ್‌ ನಂಬರ್‌ಗೆ ಕರೆ ಮಾಡಲಾಗಿದ್ದು, ಅದು ನಕಲಿ ನಂಬರ್‌ ಎಂಬುದು ಬೆಳಕಿಗೆ ಬಂದಿದೆ. ಮಹಿಳೆ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.