ಬೆಂಗಳೂರು : ದ್ವಿದಳ ಧಾನ್ಯಗಳ ಆಮದಿನ ಮೇಲೆ ನಿರ್ಬಂಧ ಹಾಗೂ ಮುಂಗಾರು ಮಳೆ ಕೊರತೆ ಸುದ್ದಿ ಹೊರಬಿದ್ದ ಪರಿಣಾಮ ಮಾರುಕಟ್ಟೆಯಲ್ಲಿ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗಬಹುದೆಂಬ ಭೀತಿಯಲ್ಲಿ ಈಗಿನಿಂದಲೇ ಬೇಳೆ ಕಾಳುಗಳನ್ನು ದೊಡ್ಡ ದೊಡ್ಡ ಕಂಪನಿಗಳು, ದಾಸ್ತಾನುಗಾರರು ಸಂಗ್ರಹಿಸಲು ಆರಂಭಿಸಿದ್ದಾರೆ. ಇದರ ಪರಿಣಾಮ ಧಾನ್ಯಗಳ ಬೆಲೆ ಏರಿಕೆಯಾಗಿಗದೆ. ತೊಗರಿ ಹಾಗೂ ಉದ್ದಿನ ಬೇಳೆ ಬೆಲೆ ಪ್ರತಿ ಕೆ.ಜಿ.ಗೆ 20ರಿಂದ 40 ರು.ವರೆಗೆ ಏರಿಕೆ ದಾಖಲಿಸಿದ್ದು, ಧಾನ್ಯಗಳ ಬೆಲೆ ಕೇಳಿದ ಗ್ರಾಹಕರು ಹೌಹಾರುತ್ತಿದ್ದಾರೆ.

ಹವಾಮಾನ ಇಲಾಖೆ ಮೂಲಗಳ ಪ್ರಕಾರ ಈ ಬಾರಿ ಭಾರತದಲ್ಲಿ ಮುಂಗಾರು ಮಳೆಯಲ್ಲಿ ವ್ಯತ್ಯಯವಾಗಲಿದೆ. ಪ್ರತಿಶತ ಸರಾಸರಿ ಶೇ.10ರಿಂದ 25 ಕೊರತೆಯಾಗಬಹುದು ಎನ್ನಲಾಗಿದೆ. ಇದರಿಂದ ಮುಂಗಾರು ಮಳೆ ಅವಲಂಬಿಸಿ ಬೆಳೆಯುವ ತೊಗರಿ, ಉದ್ದು ಸೇರಿದಂತೆ ಧಾನ್ಯಗಳ ಇಳುವರಿ ಮೇಲೆ ಪರಿಣಾಮ ಉಂಟಾಗಲಿದೆ. ಕಳೆದ ವರ್ಷ ರಾಜ್ಯದಲ್ಲಿ ತೊಗರಿ ಉತ್ಪಾದನೆ 7.5 ಲಕ್ಷ ಟನ್ ದಾಟಿತ್ತು. ಈ ಬಾರಿ ತೊಗರಿ ಉತ್ಪಾದನೆ ಇಳಿಕೆಯಾಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಹವಾಮಾನ ವೈಪರೀತ್ಯವನ್ನು ಬಂಡವಾಳವಾಗಿಸಿ ಕೊಂಡ ದಾಸ್ತಾನುಗಾರರು, ಮಧ್ಯವರ್ತಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಬೃಹತ್ ಪ್ರಮಾಣದಲ್ಲಿ ದ್ವಿದಳ ಧಾನ್ಯಗಳ ಸಂಗ್ರಹಣೆ ಮಾಡಿರುವ ಪರಿಣಾಮ ತೊಗರಿ, ಉದ್ದು ಸೇರಿದಂತೆ ವಿವಿಧ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ತೊಗರಿ ಮತ್ತು ಉದ್ದಿನ ಬೇಳೆ ಬೆಲೆ ಪ್ರತಿ ಕೆ.ಜಿ.ಗೆ ಶೇ. 40 ರಷ್ಟು ಏರಿಕೆ ಆಗಿದೆ. ಉದ್ದಿನ ಬೇಳೆ ಕೆ.ಜಿ.ಗೆ 80 ರಿಂದ 130 ರು. ದಾಟಿದೆ. 70 ರು. ಆಜುಬಾಜಿನಲ್ಲಿದ್ದ ತೊಗರಿ ಬೆಲೆ 90 ರಿಂದ 110 ರು. ದಾಟಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆಯೇ ವಿನಃ ಕಡಿಮೆ ಆಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಕೇಂದ್ರ ಸರ್ಕಾರ ರೈತರ ಉತ್ಪಾದನೆಗೆ ಸಮರ್ಥ ನೀಯ ಬೆಲೆ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಧಾನ್ಯಗಳ ಆಮದಿನ ಮೇಲೆ ನಿರ್ಬಂಧ ಹೇರಿತ್ತು. ಇದರ ವ್ಯತಿರಿಕ್ತ ಪರಿಣಾಮ ಈಗ ಕಾಣಿಸತೊಡಗಿದೆ. ಬೇಳೆ ಕಾಳುಗಳ ಬೆಲೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಹೆಚ್ಚುತ್ತಿದೆ.  2016 - 17ರ ಹಳೆಯ ದಾಸ್ತಾನನ್ನು ಈಗ ಸರ್ಕಾರ ಖಾಲಿ ಮಾಡಿದೆ. ಎಲ್ಲಿಯವರೆಗೆ ಹಳೆಯ ಧಾನ್ಯಗಳ ಸಂಗ್ರಹವಿತ್ತೋ ಅಲ್ಲಿಯವರೆಗೆ ಬೆಲೆ ಸ್ಥಿರವಾಗಿತ್ತು. ಆದರೆ, ಇದೀಗ ದಾಸ್ತಾನು ಖಾಲಿಯಾಗಿರುವುದರಿಂದ ತೊಗರಿ ಬೇಳೆ ದರ ಹೆಚ್ಚಿದೆ. ತೊಗರಿ ಬೇಳೆ ಕೆ.ಜಿ.ಗೆ 90 ರಿಂದ 110 ರು.ವರೆಗೆ  ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ರೈತರಿಗೆ ಲಾಭ ಸಿಗುತ್ತಿಲ್ಲ. 

ಧಾನ್ಯಗಳನ್ನು  ಮಾಮೂಲಿ ದರದಲ್ಲೇ ರೈತರಿಂದ ಖರೀದಿ ಮಾಡಲಾಗುತ್ತಿದೆ. ಆದರೆ, ಮಧ್ಯವರ್ತಿಗಳು ಹಾಗೂ ದಾಸ್ತಾನುದಾರರು ಮಾತ್ರ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಆಹಾರ ಧಾನ್ಯಗಳ ವರ್ತಕರು. ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಲ್ಲಿ ಕಳೆದ ಮಾನ್ಸೂನ್‌ನಲ್ಲಿ ಧಾನ್ಯಗಳ ಉತ್ಪಾದನೆ ಶೇ. 50 ರಿಂದ 55 ರಷ್ಟು ಮಾತ್ರ ಆಗಿದೆ. ವಿಶೇಷವಾಗಿ ತೊಗರಿ ಬೇಳೆ ಉತ್ಪಾದನೆ ಶೇ. 50 ರಷ್ಟಾಗಿದೆ. 2018 ರ  ಡಿಸೆಂಬರ್‌ನಲ್ಲಿ ತೊಗರಿ ಬೇಳೆ ಬೆಲೆ ಕೆ.ಜಿ.ಗೆ 40 - 40 ರು. ಆಸುಪಾಸಿನಲ್ಲಿತ್ತು. ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಯಾಗುತ್ತಿದೆ. ಹೆಸರು ಕಾಳು ಬೆಲೆ ಕೆ.ಜಿ. 80 - 96  ರು., ಹೆಸರು ಬೇಳೆ 80 - 97  ರು. ವರೆಗೆ ಏರಿಕೆಯಾಗಿದೆ. ಪ್ರತಿ ಕ್ವಿಂಟಲ್‌ಗೆ ಕಡ್ಲೆಬೇಳೆ 5700 ರಿಂದ 5800 ರು.ಗೆ ಮಾರಾಟವಾಗುತ್ತಿದೆ. ಜೂನ್ ಹಾಗೂ ಜುಲೈ ವೇಳೆಗೆ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎನ್ನುತ್ತಾರೆ ಎಪಿಎಂಸಿ ಆಹಾರ ಧಾನ್ಯಗಳ ಸಗಟು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ. ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ವರದಿ : ಕಾವೇರಿ ಎಸ್.ಎಸ್