ಅಪನಗದೀಕರಣ, ತರಾತುರಿಯ ಜಿಎಸ್‌ಟಿ ಜಾರಿಯಿಂದಾಗಿ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ ಎಂಬ ಟೀಕೆಗಳ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಗುರುವಾರ ಇಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.

ನವದೆಹಲಿ: ಅಪನಗದೀಕರಣ, ತರಾತುರಿಯ ಜಿಎಸ್‌ಟಿ ಜಾರಿಯಿಂದಾಗಿ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ ಎಂಬ ಟೀಕೆಗಳ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಗುರುವಾರ ಇಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಚರ್ಚಿತ ಅಂಶಗಳ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿಲ್ಲವಾದರೂ, ಕುಸಿದಿರುವ ಆರ್ಥಿಕತೆಗೆ ಉತ್ತೇಜನಾ ಪ್ಯಾಕೇಜ್ ಘೋಷಿಸುವ ಕುರಿತು ಮೂವರೂ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಸಜ್ಜಾಗುತ್ತಿರುವ ಗುಜರಾತ್‌ಗೆ ಪ್ರಚಾರಕ್ಕಾಗಿ ಅ.7 ಮತ್ತು 8ರಂದು ತೆರಳಲಿದ್ದಾರೆ. ಅದಕ್ಕೂ ಮುನ್ನವೇ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಣೆಯ ಸಾಧ್ಯತೆ ಇದೆ.

ಹೀಗಾಗಿಯೇ ಗುರುವಾರ ಈ ದಿಢೀರ್ ಸಭೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಬುಧವಾರ ಪ್ರಕಟಗೊಂಡ ಆರ್‌ಬಿಐನ ಸಾಲ ನೀತಿಯಲ್ಲೂ, ದೇಶದ ಆರ್ಥಿಕತೆ ಸಂಕಷ್ಟದಲ್ಲಿರುವುದನ್ನು ಪ್ರಸ್ತಾಪಿಸಲಾಗಿತ್ತು. ಅದರ ಬೆನ್ನಲ್ಲೇ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜಿಡಿಪಿ ಕುಸಿತವನ್ನು ಒಪ್ಪಿಕೊಂಡಿದ್ದರಾದರೂ, ಅದನ್ನು ಮೇಲೆತ್ತಲೂ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಕೇರಳದಲ್ಲಿ ಆಯೋಜನೆಗೊಂಡಿರುವ ಜನರಕ್ಷಾ ಯಾತ್ರೆಯಲ್ಲಿ ಭಾಗಿಯಾಗಿದ್ದ ಅಮಿತ್ ಶಾ, ಗುರುವಾರ ಸಿಎಂ ಪಿಣರಾಯಿ ವಿಜಯನ್ ಅವರ ಸ್ವಕ್ಷೇತ್ರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಬೇಕಿತ್ತು. ಈ ರ್ಯಾಲಿಯನ್ನೂ ಬದಿಗೊತ್ತಿ ಅವರು ಗುರುವಾರ ದೆಹಲಿಗೆ ದೌಡಾಯಿಸಿ ಸಭೆಯಲ್ಲಿ ಭಾಗಿಯಾಗಿದ್ದರು.