ಪಂಚರಾಜ್ಯ ಚುನಾವಣೆ ಬಳಿಕ ಬಿಜೆಪಿ ಕಣ್ಣು ರಾಜ್ಯದ ಮೇಲೆ ಬಿದ್ದಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದ ಬಳಿಕ ಅಧಿಕಾರಕ್ಕೆ ಏರಲು ಕೇಸರಿ ಬ್ರಿಗೇಡ್ ಈಗಲೇ ತಯಾರಿ ನಡೆಸಿದೆ. ಹೀಗಾಗಿ 2018ರ ಅಸೆಂಬ್ಲಿ ಎಲೆಕ್ಷನ್ ಗೆಲ್ಲಲು ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯೋನ್ಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದಿದ್ದು ರಣತಂತ್ರ ರಚಿಸಲಿದ್ದಾರೆ.
ಬೆಂಗಳೂರು(ಮಾ.31): ಪಂಚರಾಜ್ಯ ಚುನಾವಣೆ ಬಳಿಕ ಬಿಜೆಪಿ ಕಣ್ಣು ರಾಜ್ಯದ ಮೇಲೆ ಬಿದ್ದಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದ ಬಳಿಕ ಅಧಿಕಾರಕ್ಕೆ ಏರಲು ಕೇಸರಿ ಬ್ರಿಗೇಡ್ ಈಗಲೇ ತಯಾರಿ ನಡೆಸಿದೆ. ಹೀಗಾಗಿ 2018ರ ಅಸೆಂಬ್ಲಿ ಎಲೆಕ್ಷನ್ ಗೆಲ್ಲಲು ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯೋನ್ಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದಿದ್ದು ರಣತಂತ್ರ ರಚಿಸಲಿದ್ದಾರೆ.
ಸಂಸದರ ಜೊತೆ ಮೋದಿ ಮತ್ತು ಅಮಿತ್ ಶಾ ಸಂವಾದ
ಇಂದು ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ಪ್ರಧಾನಿ ಅಧಿಕೃತ ನಿವಾಸ 7 ಲೋಕ ಕಲ್ಯಾಣ್ ಮಾರ್ಗದಲ್ಲಿ ಬಿಜೆಪಿ ಸಂಸದರ ಸಭೆ ನಡೆಯಲಿದೆ. ಕರ್ನಾಟಕ ಬಿಜೆಪಿ ಸಂಸದರು ಹಾಗೂ ಜಾರ್ಖಂಡ್, ಒಡಿಶಾ, ತಮಿಳುನಾಡು ಮತ್ತು ತೆಲಂಗಾಣ ಸಂಸದರನ್ನ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಹಾರದೊಂದಿಗೆ ಸಂಸದರ ಜೊತೆ ಸಂವಾದ ನಡೆಸಲಿದ್ದಾರೆ.
ಸಭೆಗೆ ಹಾಜರಾಗುತ್ತಿಲ್ಲ ರಾಜ್ಯದ ಮೂವರು ಸಂಸದರು
ಇಂದಿನ ಬಿಜೆಪಿ ಸಂಸದರ ಉಪಹಾರ ಕೂಟದಲ್ಲಿ ರಾಜ್ಯದ ಮೂವರು ಸಂಸದರು ಭಾಗವಹಿಸುತ್ತಿಲ್ಲ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಪ್ರಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ಶ್ರೀರಾಮುಲು ಅವರು ಮೋದಿ-ಶಾ ಮೀಟಿಂಗ್ನಲ್ಲಿ ಭಾಗವಹಿಸುತ್ತಿಲ್ಲ.
ಮಹದಾಯಿ ನದಿ ನೀರು, 2018ರ ಚುನಾವಣೆ ಚರ್ಚೆ: ಸಂಸದರಿಗೆ ಎಂಎಲ್ಎ ಟಿಕೆಟ್ ನಿರಾಕರಣೆ ಸೂಚನೆ?
ಕಳೆದ ಹತ್ತು ದಿನಗಳಿಂದ ಪ್ರಧಾನಿ ಮೋದಿ ಬಹುತೇಕ ರಾಜ್ಯಗಳ ಬಿಜೆಪಿ ಸಂಸದರೊಂದಿಗೆ ಚರ್ಚೆ ನಡೆಸಿ ವಾಸ್ತವತೆ ಪಡೆಯುವ ಜೊತೆಗೆ 2018ರ ಚುನಾವಣೆ ಸಂಬಂಧ ಅಭಿಪ್ರಾಯ ಕೇಳುತ್ತಿದ್ದಾರೆ. ಜತೆಗೆ 2019 ರ ಲೋಕಸಭೆ ತಯಾರಿ ಬಗ್ಗೆಯೂ ಕೆಲ ಟಿಪ್ಸ್ ಕೂಡ ನೀಡುತ್ತಿದ್ದಾರೆ . ಇಂದಿನ ಸಭೆಯಲ್ಲಿ 2018ರ ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಸಂಸದರಿಗೆ ಮೋದಿ ಸ್ಪಷ್ಟವಾಗಿ ಇಲ್ಲ ಅಂತ ಹೇಳುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ಪ್ರಧಾನಿ ಎದುರು ಬಹಿರಂಗವಾಗಿ ಸಂಸದರು ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸುತ್ತಾರಾ ಎನ್ನುವ ಕುತೂಹಲವಿದೆ.
