2021 ರಲ್ಲಿ ನಡೆಯಲಿರುವ ದೇಶದ 16ನೇ ಹಾಗೂ ಸ್ವತಂತ್ರ ಭಾರತದ 8ನೇ ಜನಗಣತಿಯನ್ನು ಕಾಗದರಹಿತವಾಗಿ ನಡೆಸಲಾಗುವುದೆಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪೇಪರ್‌ಲೆಸ್‌ ಜನಗಣತಿ ಹೇಗೆ ನಡೆಯಲಿದೆ? ಅದರ ಸಾಧಕ-ಬಾಧಕಗಳೇನು? ಈ ಹಿಂದಿನ ಗಣತಿ ಹೇಗಿತ್ತು? ಡಿಜಿಟಲ್‌ ಸೆನ್ಸಸ್‌ ನಡೆಸುತ್ತಿರುವ ದೇಶಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

12000 ಕೋಟಿ ರು. ಡಿಜಿಟಲ್‌ ಜನಗಣತಿಗೆ ಮಾಡಲಿರುವ ವೆಚ್ಚ

33 ಲಕ್ಷ 2021ರ ಜನಗಣತಿಯಲ್ಲಿ ಭಾಗವಹಿಸುವ ಸಿಬ್ಬಂದಿ

7000 ಟನ್‌ 2011ರ ಜನಗಣತಿಗೆ ಬಳಕೆಯಾದ ಕಾಗದದ ಅಂದಾಜು ತೂಕ

ಡಿಜಿಟಲ್‌ ಗಣತಿ ಹೇಗೆ ನಡೆಯಲಿದೆ?

ಕೇಂದ್ರ ಸರ್ಕಾರ 2021ರ ಜನಗಣತಿಗೆಂದೇ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸುತ್ತಿದೆ. ಜನಸಂಖ್ಯಾ ಸಮೀಕ್ಷೆಯಲ್ಲಿ ಭಾಗವಹಿಸುವ ಎಣಿಕೆದಾರರು ಅದನ್ನು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಡೌನ್‌ಲೋಡ್‌ ಮಾಡಿಕೊಂಡು, ಈ ಹಿಂದೆ ಕಾಗದದಲ್ಲಿ ಬರೆದುಕೊಳ್ಳುತ್ತಿದ್ದ ಮಾಹಿತಿಯನ್ನು ಆ್ಯಪ್‌ನಲ್ಲಿ ನಮೂದಿಸುತ್ತಾರೆ.

ತಾಪತ್ರಯ ಬಿಡಿ.. ಪಾಸ್ಪೋರ್ಟ್, ಆಧಾರ್, ಲೈಸೆನ್ಸ್ ಎಲ್ಲಾದಕ್ಕೂ ಒಂದೇ ಕಾರ್ಡ್

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಡಿಜಿಟಲೀಕರಣದ ವಿಶ್ವಾಸಾರ್ಹತೆ ಪರೀಕ್ಷಿಸಲು ಮುಂದಿನ 2 ತಿಂಗಳ ಒಳಗಾಗಿ ಈ ಆ್ಯಪ್‌ ಬಳಸಿ 50 ಲಕ್ಷ ನಿವಾಸಿಗಳ ಮಾಹಿತಿ ಕಲೆಹಾಕಿ ಸ್ಯಾಂಪಲ್‌ ಸಮೀಕ್ಷೆ ನಡೆಸಲಾಗುತ್ತದೆ. ಈ ಡೇಟಾವು ಕೇವಲ ಸರ್ಕಾರದ ಆಂತರಿಕ ಬಳಕೆಗೆ ಮಾತ್ರ ಸೀಮಿತವಾಗಿರುತ್ತದೆ.

ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಏನು ಮಾಡುತ್ತಾರೆ?

ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ಮೊಬೈಲ್‌ ನೆಟ್‌ವರ್ಕ್ ಲಭ್ಯವಾಗುವುದಿಲ್ಲ. ಹಾಗಾಗಿ ಅಂಥ ಪ್ರದೇಶದಲ್ಲಿ ಇಂಟರ್‌ನೆಟ್‌ ಬಳಕೆ ಸಾಧ್ಯವಿಲ್ಲ. ಹಾಗಿದ್ದಾಗ ಆ್ಯಪ್‌ ಹೇಗೆ ಕಾರ‍್ಯನಿರ್ವಹಿಸುತ್ತದೆ ಎಂಬ ಪ್ರಶ್ನೆ ಮೂಡಬಹುದು. ಆದರೆ ಅಧಿಕೃತ ಮಾಹಿತಿ ಪ್ರಕಾರ ಗಣತಿ ಮಾಹಿತಿ ಸಂಗ್ರಹಕ್ಕೆ ರೂಪಿಸಲಾಗುವ ಆ್ಯಪ್‌ ಆಫ್‌ಲೈನ್‌ನಲ್ಲೂ ಕಾರ್ಯನಿರ್ವಹಿಸಲಿದೆ. ಬೇಸಿಕ್‌ ಸ್ಮಾರ್ಟ್‌ಫೋನ್‌ನಲ್ಲಿಯೂ ಈ ಆ್ಯಪ್‌ ಡೌನ್‌ಲೋಡ್‌ ಮಾಡಿ ಬಳಕೆ ಮಾಡಬಹುದು.

ಈ ಆ್ಯಪ್‌ ಬಳಕೆಗೆ ಪಾಸ್‌ವರ್ಡ್‌ ಇರುತ್ತದೆ ಹಾಗೂ ಇದರಲ್ಲಿ 18 ಭಾಷೆಗಳಲ್ಲಿ ಮಾಹಿತಿಯನ್ನು ಕಲೆಹಾಕಬಹುದು. ಎಣಿಕೆದಾರರು ಸ್ಮಾರ್ಟ್‌ಫೋನಿನೊಟ್ಟಿಗೆ ನಿಗದಿಪಡಿಸಿದ ಪ್ರದೇಶಗಳಲ್ಲಿ ಓಡಾಡಿ ಈ ಹಿಂದಿನಂತೆ ಮಾಹಿತಿ ಕಲೆಹಾಕಬೇಕಷ್ಟೆ. ಈ ಮಾಹಿತಿಯು ಸ್ವಯಂಚಾಲಿತವಾಗಿ ಸೆನ್ಸಸ್‌ ಡೇಟಾಬೇಸ್‌ನಲ್ಲಿ ಸಂಗ್ರಹಗೊಳ್ಳುತ್ತದೆ. ಡಿಜಿಟಲೀಕರಣಗೊಳಿಸಲೆಂದೇ ಈ ಬಾರಿ ಪ್ರಶ್ನೆಗಳ ಸ್ವರೂಪವನ್ನೂ ಬದಲಾಯಿಸಲಾಗಿದೆ.

ಹುಟ್ಟಿದೂರು ಬಿಟ್ಟು ಅನ್ಯ ರಾಜ್ಯಗಳಲ್ಲಿ ನೆಲೆಸಿದ್ದಾರೆ 5.6 ಕೋಟಿ ಜನ!

ಹಾಗೆಯೇ ಈ ಬಾರಿ ಇಂಟರ್‌ನೆಟ್‌ ಬಳಕೆ ಬಗ್ಗೆ ಕೂಡ ಪ್ರಶ್ನೆ ಇರಲಿದೆ. ಜೊತೆಗೆ ಪ್ರಶ್ನೆಗಳ ಸಂಖ್ಯೆಯನ್ನು ಕಡಿಮೆಮಾಡಲು ಕೆಲ ಪ್ರಶ್ನೆಗಳನ್ನು ಕ್ಲಬ್‌ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ. ಆ್ಯಪ್‌ನ ಭದ್ರತೆಯ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಿದೆ. ಸುರಕ್ಷಿತ ನೆಟ್‌ವರ್ಕ್ ಮೂಲಕ ಡೇಟಾ ವರ್ಗಾವಣೆ ನಡೆಯಲಿದೆ ಹಾಗೂ ದೇಶದ ಪ್ರಜೆಗಳ ವೈಯಕ್ತಿಕ ವಿವರಗಳನ್ನು ರಕ್ಷಿಸಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.

3 ಹಂತಗಳಲ್ಲಿ ನಡೆಯಲಿದೆ ಡಿಜಿಟಲ್‌ ಗಣತಿ

2021ರ ಜನಗಣತಿಯು ಮೂರು ಹಂತಗಳಲ್ಲಿ ನಡೆಯಲಿದೆ. ಎಣಿಕೆ ಪ್ರಕ್ರಿಯೆಯು 2020ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಡೆಯಲಿದೆ. ಜನಸಂಖ್ಯಾ ಗಣತಿಯು 2021ರ ಫೆಬ್ರವರಿ 9ರಿಂದ 28ರ ವರೆಗೆ ನಡೆಯಲಿದೆ. ರಿವಿಶನ್‌ ರೌಡ್‌ 2021ರ ಮಾಚ್‌ರ್‍ 1ರಿಂದ 15ರ ವರೆಗೆ ನಡೆಯಲಿದೆ. ಮೊದಲ ಹಂತದಲ್ಲಿ ಕಚೇರಿಗಳು ಮತ್ತು ವಸತಿ ಗೃಹಗಳ ಸಂಖ್ಯೆಯನ್ನು ಪಟ್ಟಿಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಕುಟುಂಬಗಳ ಮುಖ್ಯಸ್ಥರು ಮತ್ತು ಕೆಲಸ ಮಾಡುವ ವೃತ್ತಿಪರರ ವಿವರಗಳನ್ನು ಕಲೆಹಾಕಲಾಗುತ್ತದೆ.

ಮೂರನೇ ಹಂತದಲ್ಲಿ ಇತ್ತೀಚಿನ ಜನನ ಮತ್ತು ಮರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಅದಾದ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಒಟ್ಟಾರೆ ಈ ಬಾರಿಯ ಜನಗಣತಿಗೆ 12 ಸಾವಿರ ಕೋಟಿ ರು. ವ್ಯಯ ಮಾಡಲಾಗುತ್ತಿದ್ದು, 33 ಲಕ್ಷ ಮಂದಿ ಈ ಗಣತಿ ಕಾರ‍್ಯದಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಭಾಗವಹಿಸುವ ಸಿಬ್ಬಂದಿಗೆ ಸ್ವಂತ ಸ್ಮಾರ್ಟ್‌ಫೋನ್‌ ಬಳಸುವಂತೆ ಪ್ರೋತ್ಸಾಹಿಸಲಾಗುವುದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರದಿಂದ ನಡೆಯುತ್ತಿದೆ ಹೊಸ ಗಣತಿ

ಶಿಕ್ಷಕರಿಗೆ ಗಣತಿಯಿಂದ ಮುಕ್ತಿ ಸಿಗುತ್ತದೆಯೇ?

ಇಲ್ಲ! ಆ್ಯಪ್‌ ಮೂಲಕ ನಡೆಯುವ ಈ ಗಣತಿಯಲ್ಲಿ ಜನರು ತಮ್ಮ ಸ್ವಂತ ಮೊಬೈಲ್‌ಗೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಗಣತಿಯ ಮಾಹಿತಿ ನೀಡುವುದಿಲ್ಲ. ಬದಲಿಗೆ ಗಣತಿ ಸಿಬ್ಬಂದಿ ತಮ್ಮ ಮೊಬೈಲ್‌ಗೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಮನೆಮನೆಗೆ ತೆರಳಿ, ಇಷ್ಟುವರ್ಷ ಕಾಗದದಲ್ಲಿ ಬರೆದುಕೊಳ್ಳುತ್ತಿದ್ದ ಮಾಹಿತಿಯನ್ನು ಆ ಆ್ಯಪ್‌ನಲ್ಲಿ ನಮೂದಿಸಿಕೊಳ್ಳುತ್ತಾರೆ.

ಡಿಜಿಟಲ್‌ ಸೆನ್ಸಸ್‌ ಉಪಯೋಗ ಏನು?

- ವೇಗವಾಗಿ ಗಣತಿ, ಸಮಯದ ಉಳಿತಾಯ

- ಕರಾರುವಾಕ್ಕಾದ ಮಾಹಿತಿ

- ಸಾವಿರಾರು ಟನ್‌ ಕಾಗದ ಉಳಿತಾಯ

- ಪರಿಸರ ಸಂರಕ್ಷಣೆ

- ವಿಲೇವಾರಿ ತಲೆನೋವಿಲ್ಲ

- ದಾಖಲೆಗಳನ್ನು ಸಂಗ್ರಹಿಡಬೇಕಾದ ಅಗತ್ಯವಿಲ್ಲ. ಎಲ್ಲಾ ಡೇಟಾವು ಡಿಜಿಟಲೀಕರಣಗೊಂಡು ಕಂಪ್ಯೂಟರ್‌ಗಳಲ್ಲಿ ದಾಖಲಾಗಿರುತ್ತದೆ.

- ಗಣತಿ ಮಾಹಿತಿ ಪಡೆಯುವುದೂ ಸುಲಭ

- ಮಗುವೊಂದು ಹುಟ್ಟಿದ 18 ವರ್ಷಕ್ಕೆ ಯಾವ ನೋಂದಣಿಯೂ ಇಲ್ಲದೆ ಮತದಾರರ ಗುರುತಿನ ಚೀಟಿಯೂ ಇಲ್ಲದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು

- ಲೆಕ್ಕಾಚಾರ ಸುಲಭ

ಗಣತಿ ನಂತರ ಕಾಗದ

ಪತ್ರಗಳು ಏನಾಗುತ್ತಿದ್ದವು?

ಸ್ವತಂತ್ರ ಭಾರತದ ಮೊಟ್ಟಮೊದಲ ಜನಗಣತಿ ನಡೆದಿದ್ದು 1951ರಲ್ಲಿ. ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ತಿದ್ದುಪಡಿ ನಿಯಮದ ಪ್ರಕಾರ ಗಣತಿ ದಾಖಲೆಗಳ ಎಲೆಕ್ಟ್ರಾನಿಕ್‌ ದಾಖಲೆಯನ್ನು ರಚಿಸಿದ ನಂತರ ಗಣತಿ ಕೈಗೊಂಡಿದ್ದ ಎಲ್ಲಾ ಕಾಗದಪತ್ರಗಳನ್ನು ಜನಗಣತಿ ಕಾರ್ಯಾಚರಣೆಯ ನಿರ್ದೇಶಕರು ಸಂಪೂರ್ಣವಾಗಿ ಅಥವಾ ಭಾಗಶಃ ವಿಲೇವಾರಿ ಮಾಡಲು ಅವಕಾಶವಿದೆ. ಆದರೆ ಗೃಹ ಇಲಾಖೆಯ ವಕ್ತಾರರೊಬ್ಬರು ಇತ್ತೀಚೆಗೆ ‘ದಿ ಹಿಂದು’ ಪ್ರತಿಕೆಗೆ ಈ ಬಗ್ಗೆ ಪ್ರತಿಕ್ರಿಯಿಸಿ, ‘ಇಲ್ಲಿಯವರೆಗೆ ಎಣಿಕೆದಾರರು ಮನೆಮನೆಗೆ ಹೋಗಿ ಕಲೆಹಾಕಿದ್ದ ಮಾಹಿತಿಯನ್ನು ಒಳಗೊಂಡಿರುವ ಎಲ್ಲಾ ಕಾಗದಪತ್ರದ ದಾಖಲೆಗಳನ್ನು ದೆಹಲಿಯ ಸರ್ಕಾರಿ ಗೋದಾಮಿನಲ್ಲಿ ಭೌತಿಕ ರೂಪದಲ್ಲಿ ಸಂಗ್ರಹಿಸಿಡಲಾಗಿದೆ’ ಎಂದು ಹೇಳಿದ್ದಾರೆ. ಈ ಕಾಗದ ಪತ್ರಗಳು ವ್ಯಕ್ತಿಗಳ ವಿವರಗಳನ್ನು ಒಳಗೊಂಡಿರುವ ಕೋಷ್ಟಕ ರೂಪದಲ್ಲಿವೆ. ಇದನ್ನಾಧರಿಸಿ ಜನಸಂಖ್ಯೆ, ಭಾಷೆ ಮತ್ತು ಉದ್ಯೋಗದ ಬಗ್ಗೆ ಸೂಕ್ತವಾದ ಮಾಹಿತಿಯನ್ನು ವಿಂಗಡಿಸಿ ಪ್ರಕಟಿಸಲಾಗುತ್ತದೆ.

ಮಾತೃಭಾಷೆ: ದೇಶದಲ್ಲಿರುವ ಕನ್ನಡ ಭಾಷಿಗರ ಪ್ರಮಾಣವೆಷ್ಟು..?

ಸಂಪೂರ್ಣ ಕಾಗದರಹಿತ ಸಾಧ್ಯವೇ?

ಭಾರತ 2021ರ ಜನಗಣತಿಯನ್ನು ಕಾಗದರಹಿತವಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಕೆಲವರ ಪ್ರಕಾರ ತತ್‌ಕ್ಷಣ ಸಂಪೂರ್ಣ ಕಾಗದರಹಿತ ಗಣತಿ ಸಾಧ್ಯವಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಿಗೇ ಇನ್ನೂ ಸಂಪೂರ್ಣ ಕಾಗದರಹಿತ ಸೆನ್ಸಸ್‌ ನಡೆಸಲು ಸಾಧ್ಯವಾಗಿಲ್ಲ. ಕಾಗದರಹಿತ ಗಣತಿಯು ತನ್ನದೇ ಆದ ಸಾಧಕ-ಬಾಧಕಗಳನ್ನು ಒಳಗೊಂಡಿದೆ.

ಇದಕ್ಕಿರುವ ದೊಡ್ಡ ಅಡತಡೆ ಎಂದರೆ ಡೇಟಾ ಕಳವು ಮತ್ತು ಖಾಸಗಿತನ. ಸಮಯ, ಕಾಗದ ಪತ್ರಗಳ ಉಳಿತಾಯವಾಗಬಹುದು. ಆದರೆ ಇಂದಿನ ಆಧುನಿಕ ಯುಗದಲ್ಲಿ ಇಂಥ ಸೂಕ್ಷ್ಮ ಮಾಹಿತಿ ಕಳವಾಗುವ ಅಪಾಯ ಹೆಚ್ಚಿದೆ. ಆಧಾರ್‌ ಜಾರಿ ಮಾಡುವಾಗಲೂ ಸರ್ಕಾರ ಖಾಸಗಿತನಕ್ಕೆ ಧಕ್ಕೆಯಾಗದು ಎಂದು ಭರವಸೆ ನೀಡಿತ್ತು. ಆದರೆ ಹಲವಾರು ಜನರ ಆಧಾರ್‌ ದುರುಪಯೋಗವಾಗುತ್ತಿದೆ ಎಂಬ ವಿವಾದಗಳು ಈಗಾಗಲೇ ಕೇಳಿಬಂದಿವೆ.

ಜನಗಣತಿ ಎಂದರೇನು?

ಜನಗಣತಿ ಎಂದರೆ ಒಂದು ರಾಷ್ಟ್ರದಲ್ಲಿ ಅಥವಾ ರಾಜ್ಯದಲ್ಲಿ ಇರುವ ಜನರ ದಾಖಲೆಯನ್ನು ಸರ್ಕಾರದ ಕಡತದಲ್ಲಿ ನಮೂದಿಸುವ ಪ್ರಕ್ರಿಯೆ. ಇದರಿಂದ ವ್ಯಕ್ತಿಯು ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮಾಜಿಕ ಹಕ್ಕುಗಳಿಗೆ ಬಾಧ್ಯಸ್ಥನಾಗುತ್ತಾನೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಭಾರತದ ಜನಗಣತಿಯು ಭಾರತದ ಸಮಗ್ರ ಜನಸಂಖ್ಯೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಮೊಟ್ಟಮೊದಲ ಗಣತಿ ನಡೆದಿದ್ದು 1872ರಲ್ಲಿ.

ಮೊದಲ ನಿಯಮಿತ ಗಣತಿ 1881ರಲ್ಲಿ ಲಾರ್ಡ್‌ ರಿಪ್ಪನ್‌ರಿಂದ ಆರಂಭವಾಯಿತು. ಇದುವರೆಗೆ 16 ಗಣತಿಗಳು ನಡೆದಿವೆ. ರಿಜಿಸ್ಟ್ರಾರ್‌ ಜನರಲ… ಆ್ಯಂಡ್‌ ಸೆನ್ಸಸ್‌ ಕಮಿಷನರ್‌ ಆಫ್‌ ಇಂಡಿಯಾ- ದೆಹಲಿ ಈ ಸಮೀಕ್ಷೆಯನ್ನು ಕೈಗೊಳ್ಳುತ್ತದೆ. ಇದು 1948ರ ಸೆನ್ಸಸ್‌ ಆಫ್‌ ಇಂಡಿಯಾ ಆ್ಯಕ್ಟ್ ಅಡಿ ಕಾರ‍್ಯನಿರ್ವಹಿಸುತ್ತದೆ. ಈ ಕಾನೂನು ಪ್ರತಿಯೊಬ್ಬ ನಾಗರಿಕನೂ ಜನಗಣತಿ ವೇಳೆಯಲ್ಲಿ ಕೇಳುವ ಮಾಹಿತಿಯನ್ನು ನಿಖರವಾಗಿ ಹೇಳಬೇಕು ಎಂದು ಕಡ್ಡಾಯಗೊಳಿಸಿದೆ. ಕೇಳಲಾದ ಪ್ರಶ್ನೆಗಳಿಗೆ ತಪ್ಪು ಮಾಹಿತಿ ನೀಡಿದರೆ ಅಥವಾ ಉತ್ತರ ಕೊಡದಿದ್ದರೆ ಈ ಕಾನೂನಿನಡಿ ದಂಡ ವಿಧಿಸಬಹುದು. ಈ ಕಾಯ್ದೆಯ ಮಹತ್ವದ ಅಂಶವೆಂದರೆ ಇದರಲ್ಲಿ ಸಂಗ್ರಹಿಸಿದ ಪ್ರತಿಯೊಬ್ಬರ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿರಿಸುವುದು.

ಹಿಂದಿನ ಗಣತಿ ಹೇಗೆ ನಡೆಯುತ್ತಿತ್ತು?

ಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲು ಮನೆ ಪಟ್ಟಿಮಾಡುವುದು, ಮನೆ ಸಂಖ್ಯೆ ನಮೂದು ಮಾಡುವುದು. ಎರಡನೆಯದು ನಿಜವಾದ ಜನಸಂಖ್ಯಾ ಎಣಿಕೆ. ಗಣತಿಯು ಪ್ರಚಾರ ಪದ್ಧತಿಯಲ್ಲಿ ನಡೆಯುತ್ತದೆ. ಈ ಪ್ರಕಾರ ವಿಶೇಷ ತರಬೇತಿ ಪಡೆದ ಸಿಬ್ಬಂದಿಯು ಪ್ರತಿ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸುತ್ತಾರೆ.

ನೀರು ಮತ್ತು ವಿದ್ಯುತ್‌ ಪೂರೈಕೆ, ಭೂಮಿ ಒಡೆತನ, ವಾಹನಗಳು, ಕಂಪ್ಯೂಟರ್‌ಗಳು ಮತ್ತು ಇನ್ನಿತರ ಆಸ್ತಿಗಳು ಮತ್ತು ಸೇವೆಗಳು ಇತ್ಯಾದಿ ಬಗ್ಗೆ ಅವರಲ್ಲಿ ವಿವರಣಾತ್ಮಕ ಪ್ರಶ್ನೆ ಕೇಳಿ, ಅದಕ್ಕೆ ಜನರಿಂದ ಉತ್ತರ ಪಡೆಯುತ್ತಾರೆ. ಎರಡನೆಯ ಹಂತದಲ್ಲಿ ಒಟ್ಟು ಜನಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಮೊದಲಿಗೆ ಎ3 ಅಳತೆಯ ಕಾಗದದ ವೇಳಾಪಟ್ಟಿಯನ್ನು ಸ್ಕಾ್ಯನ್‌ ಮಾಡಿ, ಓದಿ, ನಂತರ ಅದರ ಸಂಖ್ಯಾತ್ಮಕ ಡೇಟಾವನ್ನು ಸಾಪ್ಟ್‌ವೇರ್‌ಗೆ ಪರಿವರ್ತಿಸಲಾಗುತ್ತಿತ್ತು. ಇದೊಂದು ಸುದೀರ್ಘ ಪ್ರಕ್ರಿಯೆ.

ಯಾವ್ಯಾವ ದೇಶದಲ್ಲಿ ಡಿಜಿಟಲ್‌ ಗಣತಿ ಇದೆ?

ಕೆನಡಾ

ಸಿಂಗಾಪುರ

ನಾರ್ವೆ

ಆಸ್ಪ್ರೇಲಿಯಾ

ನ್ಯೂಜಿಲೆಂಡ್‌

ಸ್ವಿಜರ್ಲೆಂಡ್‌

ದಕ್ಷಿಣ ಕೊರಿಯಾ

ಅಮೆರಿಕ

ಸ್ಪೇನ್‌