ಮಾತೃಭಾಷೆ: ದೇಶದಲ್ಲಿರುವ ಕನ್ನಡ ಭಾಷಿಗರ ಪ್ರಮಾಣವೆಷ್ಟು..?

Hindi si  the most spoken language in India
Highlights

2011ರ ಜನಗಣತಿಯನ್ನು ಆಧರಿಸಿ ಮಾತೃಭಾಷಿಕರ ಅಂಕಿ-ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದು, ದೇಶದ ನಂ.1 ಮಾತೃಭಾಷೆ ಎಂಬ ಖ್ಯಾತಿಗೆ ಹಿಂದಿ ಪಾತ್ರವಾಗಿದೆ. ಬಂಗಾಳಿ ಹಾಗೂ ಮರಾಠಿ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದ್ದು, ಕನ್ನಡವು 8ನೇ ಸ್ಥಾನ ಸಂಪಾದಿಸಿದೆ.

ನವದೆಹಲಿ :  2011ರ ಜನಗಣತಿಯನ್ನು ಆಧರಿಸಿ ಮಾತೃಭಾಷಿಕರ ಅಂಕಿ-ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದು, ದೇಶದ ನಂ.1 ಮಾತೃಭಾಷೆ ಎಂಬ ಖ್ಯಾತಿಗೆ ಹಿಂದಿ ಪಾತ್ರವಾಗಿದೆ. ಬಂಗಾಳಿ ಹಾಗೂ ಮರಾಠಿ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದ್ದು, ಕನ್ನಡವು 8ನೇ ಸ್ಥಾನ ಸಂಪಾದಿಸಿದೆ.

ವಿಶೇಷವೆಂದರೆ ಕನ್ನಡವನ್ನು ಮಾತೃಭಾಷೆ ಎಂದು 2011ರ ಜನಗಣತಿಯಲ್ಲಿ ನಮೂದಿಸಿದವರ ಪ್ರಮಾಣ ದೇಶದ ಒಟ್ಟಾರೆ ವಿವಿಧ ಭಾಷಿಕರ ಶೇಕಡಾವಾರು ಅಂಕಿ-ಸಂಖ್ಯೆಗಳನ್ನು ಗಮನಿಸಿದಾಗ ಶೇ.3.69ರಿಂದ (2001ರ ಗಣತಿ ಪ್ರಕಾರ) ಶೇ.3.73ಕ್ಕೇರಿದೆ.

ಕನ್ನಡವನ್ನು ಪ್ರಥಮ ಭಾಷೆ ಎಂದು 2011ರಲ್ಲಿ 4.37 ಕೋಟಿ ಜನರು ಜನಗಣತಿ ವೇಳೆ ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಪ್ರಮಾಣ 2001ರಲ್ಲಿ 3.79 ಕೋಟಿ ಇತ್ತು. ಹೀಗಾಗಿ ಕನ್ನಡ ಮಾತೃಭಾಷಿಕರ ಸಂಖ್ಯೆ ಸುಮಾರು 58 ಲಕ್ಷದಷ್ಟುಹೆಚ್ಚಳವಾಗಿದೆ. ಹಾಗಂತ ಉಳಿದ ಸುಮಾರು 2 ಕೋಟಿ ಕರ್ನಾಟಕದ ಜನರಿಗೆ ಕನ್ನಡ ಗೊತ್ತೇ ಇಲ್ಲ ಎಂದರ್ಥವಲ್ಲ. ಅವರು ಕನ್ನಡವನ್ನು ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಕನ್ನಡವನ್ನು ಮಾತೃಭಾಷೆ ಎಂದು ಪರಿಗಣಿಸಿಲ್ಲ. 2001ರಲ್ಲಿ ಕರ್ನಾಟಕದ ಜನಸಂಖ್ಯೆ 5.28 ಕೋಟಿ ಇದ್ದರೆ 2011ರಲ್ಲಿ 6.10 ಕೋಟಿ ಇತ್ತು.

ಹಿಂದಿ ನಂ.1:  ದೇಶದ 22 ಅನುಸೂಚಿತ ಅಧಿಕೃತ ಭಾಷೆಗಳಲ್ಲಿ ಹಿಂದಿ ನಂ.1 ಸ್ಥಾನ ಗಳಿಸಿದೆ. ದೇಶದಲ್ಲಿ 2001ರಲ್ಲಿ ಶೇ.41.03 ಜನರು ಹಿಂದಿ ಮಾತನಾಡುತ್ತಿದ್ದರು. ಅವರ ಪ್ರಮಾಣ ಈಗ ಶೇ.43.63ಕ್ಕೇರಿದೆ. ಇನ್ನು ಬಂಗಾಳಿ 2ನೇ ಸ್ಥಾನ ಪಡೆದಿದೆಯಾದರೂ ಅದರ ಪ್ರಮಾಣ ಶೇ.8.11ರಿಂದ ಶೇ.8.3ಕ್ಕೆ ಕುಸಿದಿದೆ.

ತೆಲುಗುವನ್ನು 4ನೇ ಸ್ಥಾನಕ್ಕೆ ತಳ್ಳಿ ಮರಾಠಿ ಈ ಸಲ 3ನೇ ಸ್ಥಾನ ಸಂಪಾದಿಸಿದೆ. ಮರಾಠಿ ಭಾಷಿಕರ ಸಂಖ್ಯೆ 2001ರಲ್ಲಿ ಶೇ.6.99 ಇತ್ತು. ಅದರ ಪ್ರಮಾಣ 2001ರಲ್ಲಿ ಶೇ.7.09ಕ್ಕೇರಿದೆ. ತೆಲುಗು ಭಾಷಿಕರ ಸಂಖ್ಯೆ 10 ವರ್ಷದಲ್ಲಿ ಶೇ.7.19ರಿಂದ ಶೇ.6.93ಕ್ಕಿಳಿದಿದೆ. ಉರ್ದು 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಉರ್ದು ಭಾಷಿಕರ ಸಂಖ್ಯೆ ಶೇ.5.01ರಿಂದ ಶೇ.4.19ಕ್ಕಿಳಿದಿದೆ. ಶೇ.4.74 ಮಾತೃಭಾಷಿಕರನ್ನು ಹೊಂದಿರುವ ಗುಜರಾತಿ 6ನೇ ಸ್ಥಾನಕ್ಕೇರಿದೆ.

ಸಂಸ್ಕೃತವನ್ನು ಕೇವಲ 24,821 ಜನರು ಮಾತೃಭಾಷೆ ಎಂದು ಆಯ್ಕೆ ಮಾಡಿಕೊಂಡಿದ್ದು, ದೇಶದಲ್ಲೇ ಅತಿ ಕಡಿಮೆ ಮಾತನಾಡಲ್ಪಡುವ ಭಾಷೆಯಾಗಿದೆ. ಇದು ಬೋಡೋ, ಮಣಿಪುರಿ, ಕೊಂಕಣಿ ಹಾಗೂ ಡೋಗ್ರಿ ಭಾಷೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಮಾತನಾಡಲ್ಪಡುತ್ತದೆ.

22 ಅನುಸೂಚಿತ ಅಧಿಕೃತ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಶೇ.97ರಷ್ಟಿದ್ದು, ಉಳಿದ ಶೇ.3 ಜನರು ಮಾತ್ರ ಅನುಸೂಚಿತವಲ್ಲದ ಭಾಷೆಗಳನ್ನು ಮಾತನಾಡುತ್ತಾರೆ.

ಇಂಗ್ಲಿಷ್‌ ಮೊದಲ ಭಾಷೆ: ಕರ್ನಾಟಕ ನಂ.3

ಅನುಸೂಚಿತವಲ್ಲದ ಭಾಷೆಗಳನ್ನು ಮಾತನಾಡುವವರ ಅಂಕಿ-ಅಂಶಗಳನ್ನು ಗಮನಿಸಿದಾಗ 2.6 ಲಕ್ಷ ಜನರು ಇಂಗ್ಲಿಷ್‌ ಅನ್ನು ಮೊದಲ ಭಾಷೆ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಇವರಲ್ಲಿ 1.6 ಲಕ್ಷ ಜನ ಮಹಾರಾಷ್ಟ್ರದವರಾಗಿದ್ದಾರೆ. ತಮಿಳುನಾಡು ಇಂಗ್ಲಿಷ್‌ ಅನ್ನು ಮೊದಲ ಭಾಷೆ ಎಂದು ಆಯ್ಕೆ ಮಾಡಿಕೊಂಡವರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದ್ದು, 3ನೇ ಸ್ಥಾನ ಕರ್ನಾಟಕದ ಪಾಲಾಗಿದೆ.

loader