Asianet Suvarna News Asianet Suvarna News

ಕೇಂದ್ರದಿಂದ ನಡೆಯುತ್ತಿದೆ ಹೊಸ ಗಣತಿ

ಕೇಂದ್ರ ಸರ್ಕಾರ ಇದೀಗ ಮತ್ತೊಂದು ರೀತಿಯ ಗಣತಿ ನಡೆಸಲು ಮುಂದಾಗಿದೆ.  ದೇಶದಲ್ಲಿರುವ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವೇಳೆ, ಒಬಿಸಿಗಳ ವಿವರವನ್ನು ಸಂಗ್ರಹಿಸಲು ನಿರ್ಧರಿಸಿದೆ. 

OBC Count To Be Part Of Sensus 2021
Author
Bengaluru, First Published Sep 1, 2018, 8:24 AM IST

ನವದೆಹಲಿ: ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸಿದ್ದಾಯ್ತು, ಇದೀಗ ದೇಶದಲ್ಲಿರುವ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವೇಳೆ, ಒಬಿಸಿಗಳ ವಿವರವನ್ನು ಸಂಗ್ರಹಿಸಲು ನಿರ್ಧರಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಬಿಸಿ ವಿವರ ಸಂಗ್ರಹಕ್ಕೆ ಸರ್ಕಾರವೊಂದು ಮುಂದಾ ಗುತ್ತಿರುವುದು ಇದೇ ಮೊದಲು.

2021ಕ್ಕೆ ದೇಶಾದ್ಯಂತ ಜನಗಣತಿ ನಡೆಯಲಿದ್ದು, ಆ ವೇಳೆ ಇದೇ ಮೊದಲ ಬಾರಿಗೆ ಒಬಿಸಿ ಜನಸಂಖ್ಯೆಯ ವಿವರವನ್ನೂ ಸಂಗ್ರಹಿಸಲಾಗುತ್ತದೆ. ಒಬಿಸಿ ವಿವರ ಸಂಗ್ರಹಿಸುವ ಮೋದಿ ಸರ್ಕಾರದ ಕ್ರಮವು 2019ರ ಲೋಕಸಭೆ ಚುನಾವಣೆಗೂ ಮುನ್ನ ‘ಮಾಸ್ಟರ್‌ ಸ್ಟೊ್ರೕಕ್‌’ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿ ಓಲೈಸಿರುವ ಮೋದಿ ಸರ್ಕಾರವು, ಈಗ ಒಬಿಸಿ ಗಣತಿಗೆ ಮುಂದಾಗಿರುವುದು ಆ ಜನಾಂಗವನ್ನು ಓಲೈಸುವ ತಂತ್ರ. ಇದು 2019ರಲ್ಲಿ ಮೋದಿ ಅವರಿಗೆ ಅನುಕೂಲ ತರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

3 ವರ್ಷದಲ್ಲಿ ಗಣತಿ ಪೂರ್ಣ:  ಹಿಂದೆಲ್ಲಾ ಜನಗಣತಿ ವರದಿ ಅಂತಿಮಗೊಳ್ಳಲು ಏಳರಿಂದ ಎಂಟು ವರ್ಷಗಳು ಬೇಕಾಗಿದ್ದವು. 2021ರ ಜನಗಣತಿ ಮೂರೇ ವರ್ಷಗಳಲ್ಲಿ ಅದನ್ನು ಅಂತಿಮಗೊಳಿಸಲಾಗುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರ ಜನಗಣತಿ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಶುಕ್ರವಾರ ಸಿದ್ಧತೆ ಪರಿಶೀಲನೆ ನಡೆಸಿದ್ದು, ಆ ವೇಳೆ ಈ ಮಾಹಿತಿ ಬಹಿರಂಗವಾಗಿದೆ. 2021ರ ಜನಗಣತಿ ಕುರಿತಾದ ಮಾರ್ಗಸೂಚಿಯ ಬಗ್ಗೆ ರಾಜನಾಥ್‌ ಅವರು ಚರ್ಚೆ ನಡೆಸಿದ್ದಾರೆ. ಜನಗಣತಿ ವಿನ್ಯಾಸದಲ್ಲಿ ಸುಧಾರಣೆ ಮಾಡುವುದರ ಜತೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಗಣತಿ ಮುಗಿದ ಮೂರು ವರ್ಷದೊಳಗೆ ವರದಿ ಅಂತಿಮವಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.

ದೇಶದ ಪ್ರತಿ ಕುಟುಂಬದ ವಿವರ ಸಂಗ್ರಹಿಸುವ ಜನಗಣತಿ ಎಂಬುದು ಅತ್ಯಂತ ಬೃಹತ್‌ ಕಾರ್ಯಾಚರಣೆ. ಇದಕ್ಕಾಗಿ 25 ಲಕ್ಷ ಗಣತಿ ಸಿಬ್ಬಂದಿಗೆ ಸರ್ಕಾರ ತರಬೇತಿ ನೀಡುತ್ತದೆ. 2021ರ ಗಣತಿಗೆ ನಕ್ಷೆ ಹಾಗೂ ಜಿಯೋ ರೆಫರೆನ್ಸಿಂಗ್‌ ಸೌಲಭ್ಯ ಬಳಸಿಕೊಳ್ಳುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಒಬಿಸಿ ಗಣತಿ ರಾಜಕೀಯ ಮಹತ್ವವೇನು?

1931ರ ಜನಗಣತಿ ಆಧರಿಸಿ 1989ರಲ್ಲಿ ಅಂದಿನ ಪ್ರಧಾನಿ ವಿ.ಪಿ. ಸಿಂಗ್‌ ಅವರು ಮಂಡಲ್‌ ವರದಿ ಅನುಷ್ಠಾನಗೊಳಿಸಿದ್ದರು. ಈ ಪ್ರಕಾರ ಹಿಂದುಳಿದ (ಒಬಿಸಿ) ಸಮುದಾಯದವರಿಗೆ ಶೇ.27 ಮೀಸಲು ದೊರಕಿತ್ತು. ಇದಾದ ನಂತರ 2021ರ ಜನಗಣತಿಯ ಸಂದರ್ಭದಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬಿಸಿ ವಿವರ ಸಂಗ್ರಹ ಮಾಡಲಾಗುತ್ತಿದೆ. ಈಗ ಒಬಿಸಿ ಜನಸಂಖ್ಯಾ ಪ್ರಮಾಣ ದೇಶದಲ್ಲಿ ಶೇ.41ರಷ್ಟುಇದೆ ಎಂದು ಹೇಳಲಾಗಿದ್ದು, ಗಣತಿಯಿಂದ ಹೊರಬರುವ ಅಂಕಿ-ಅಂಶದ ಆಧಾರದಲ್ಲಿ ಮೀಸಲು ಪರಿಷ್ಕರಣೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಇದು 2019ರ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಅಸ್ತ್ರವಾಗಲಿದೆ. ತಾನು ಒಬಿಸಿ ಪರ ಎಂದು ಬಿಂಬಿಸಿಕೊಳ್ಳಲು ಬಿಜೆಪಿಗೆ ಇದು ನೆರವಾಲಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios