Asianet Suvarna News Asianet Suvarna News

ವರ್ಷವಾದರೂ ಪ್ರಶ್ನೆಯಾಗಿ ಉಳಿದಿದೆ ಡಾ. ಕಲಬುರ್ಗಿ ಹತ್ಯೆ ಗುಟ್ಟು

MM Kalburgi Killers at Large Even After One Year

‘ಭಾರತದಂಥ ಭಾವನಿಷ್ಟ ರಾಷ್ಟ್ರದಲ್ಲಿ ಸಂಶೋಧನೆ ದಾರಿ ಸರಳವಲ್ಲ. ಅಲ್ಲಿ ಸಂಶೋಧಕ ಆಗಾಗ ಸಣ್ಣ-ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ’ ಎಂದಿದ್ದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಆ.೩೦ಕ್ಕೆ ಬರೊಬ್ಬರಿ ಒಂದು ವರ್ಷ. ಇಷ್ಟಾದರೂ ಹಂತಕರ ಬಂಧನವಾಗದ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸಲು ಹಾಗೂ ಕಲಬುರ್ಗಿ ಹತ್ಯೆ ವಿರೋಧಿಸಿ ಧಾರವಾಡದಲ್ಲಿ ಮಂಗಳವಾರ ರಾಷ್ಟ್ರಮಟ್ಟದ ಜಾಥಾ, ಸಮಾವೇಶ ನಡೆಯಲಿದೆ.

ಪ್ರಗತಿಪರ ಚಿಂತಕರು ಡಾ.ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಮೂಲಕ ಈ ‘ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ’ ಹಾಗೂ ‘ಅಭಿವ್ಯಕ್ತಿ ಪರ ರಾಷ್ಟ್ರೀಯ ಸಮಾವೇಶ’ ಆಯೋಜಿಸಲಾಗಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ಚಿಂತಕರು, ಪತ್ರಿಕಾ ಸಂಪಾದಕರು, ಸಾಹಿತಿಗಳು ಈ ಪ್ರತಿಭಟನೆಗೆ ಸಾಕ್ಷಿಯಾಗಲಿದ್ದಾರೆ.

ಕಲಬುರ್ಗಿ ಕೃತಿಗಳ ಬಿಡುಗಡೆ: ಇದೇ ಕಾರ್ಯಕ್ರಮದ ನೆರಳಲ್ಲಿ ಗದಗ ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಅಂದು ಡಾ.ಎಂ.ಎಂ.ಕಲಬುರ್ಗಿ ಪ್ರಥಮ ಪುಣ್ಯಸ್ಮರಣೆ ಹಾಗೂ ವೆಬ್‌ಸೈಟ್ ಮತ್ತು ಕಲಬುರ್ಗಿ ಕುರಿತಾದ ಗ್ರಂಥಗಳ ಬಿಡುಗಡೆಯೂ ನಡೆಯಲಿದೆ.

ಧಾರವಾಡದ ಸೃಜನಾ ರಂಗಮಂದಿರದಲ್ಲಿ ಸಂಜೆ ೫ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಡಾ.ಗುರುಲಿಂಗ ಕಾಪಸೆ ಅತಿಥಿಗಳಾಗಿ ಭಾಗವಹಿಸಲಿದ್ದು, ನಾಡೋಜ ಡಾ. ಚೆನ್ನವೀರ ಕಣವಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಸರಜೂ ಕಾಟ್ಕರ್ ಅವರ ‘ಮರಾಠಿ ಕಲಬುರ್ಗಿ’, ಡಾ. ರಾಮಕೃಷ್ಣ ಮರಾಠೆ ಬರೆದ ಕನ್ನಡದ ‘ಮಹಾಮಾರ್ಗ ಡಾ.ಎಂ.ಎಂ. ಕಲಬುರ್ಗಿ’, ಪ್ರಕಾಶ ಗಿರಿಮಲ್ಲನವರ ಬರೆದ ‘ಲಿಂಗಾಯತ ಅಧ್ಯಯನ ಸಂಸ್ಥೆ ಮತ್ತು ಡಾ.ಎಂ.ಎಂ. ಕಲಬುರ್ಗಿ’ ಕೃತಿಗಳು ಬಿಡುಗಡೆಗೊಳ್ಳಲಿವೆ.

ಈಡೇರದ ಬೇಡಿಕೆ:
ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚಿಸಿ ಕಲಬುರ್ಗಿ ಹತ್ಯೆಗೈದವರನ್ನು ಕೂಡಲೇ ಬಂಧಿಸಬೇಕು, ವಿಶೇಷ ತನಿಖೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡಬಾರದು ಹಾಗೂ ಪ್ರತಿ ವರ್ಷ ಆ.೩೦ರಂದು ಸತ್ಯಶೋಧಕ ಸಂಶೋಧಕ ದಿನಾಚರಣೆ ಆಚರಿಸಬೇಕು ಎಂದು ಕಲಬುರ್ಗಿ ಹತ್ಯೆಯಾದ ೨೦೧೫ರ ಆ.೩೦ರಂದೇ ಪ್ರಗತಿಪರ ಚಿಂತಕರೆಲ್ಲರೂ ಸೇರಿ ಪ್ರಮುಖ ನಿರ್ಧಾರ ಕೈಗೊಂಡಿದ್ದರು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿರುವುದನ್ನು ಹೊರತುಪಡಿಸಿ ಮತ್ತಿನ್ಯಾವ ಬೇಡಿಕೆ ಈಡೇರಿಸಿಲ್ಲ.

ತನಿಖೆ ಚುರುಕಿನಿಂದ ನಡೆಯುತ್ತಿದೆ:
ಹುಬ್ಬಳ್ಳಿ: ಕಲಬುರ್ಗಿ ಹತ್ಯೆಯಾಗಿ ಒಂದು ವರ್ಷ ಕಳೆಯುತ್ತಿರುವ ಸಂದರ್ಭದಲ್ಲಿ ಸಾಹಿತಿಗಳು, ಪ್ರಗತಿಪರ ಚಿಂತಕರು ಒಂದೆಡೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಬುರ್ಗಿ ಹತ್ಯೆ ಕುರಿತು ರಾಜ್ಯದಲ್ಲಿ ಸಿಐಡಿ ಪೊಲೀಸರು ಚುರುಕಿನಿಂದ ತನಿಖೆ ನಡೆಸುತ್ತಿದ್ದಾರೆ. ಆದರೆ, ಯಾವುದೇ ಸುಳಿವು ಸಿಗುತ್ತಿಲ್ಲ. ಕಲಬುರ್ಗಿ ಅವರ ಹತ್ಯೆಗೂ ಮಹಾರಾಷ್ಟ್ರದ ಪಾನ್ಸರೆ ಹಾಗೂ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೂ ಸಾಮ್ಯತೆಯದೆ. ಕಲಬುರ್ಗಿ ಪ್ರಕರಣವನ್ನು ಸಿಬಿಐಗೆ ವಹಿಸಲು ಚಿಂತನೆ ಮಾಡಲಾಗಿತ್ತು. ಆದರೆ ಮಹಾರಾಷ್ಟ್ರದಲ್ಲಿ ಸಿಬಿಐ ತನಿಖೆ ನಡೆಸುತ್ತಿರುವುದರಿಂದ ಅದು ಸಾಧ್ಯವಾಗಿಲ್ಲ. ಎರಡು ರಾಜ್ಯದಲ್ಲಿ ತನಿಖೆ ನಡೆಯುತ್ತಿದೆ, ಕಾದು ನೋಡೋಣ ಎಂದು ಹೇಳಿದರು.

ಇನ್ನು ಕಲಬುರ್ಗಿ ಹೆಸರಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನ ವಹಿಸಿದೆ ಎಂಬ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇನೆ. ಮುಂದೆ ಯಾವ ಕ್ರಮಗಳಾಗಿವೆ ಎಂಬುದನ್ನು ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ.

ಮುತಾಲಿಕ್ ಆಗ್ರಹ:
ಕಲಬುರ್ಗಿ ಅವರು ಲಿಂಗಾಯತ ಧರ್ಮ, ಬಸವಣ್ಣ, ಪಂಚಾಚಾರ್ಯರು, ಮೂರ್ತಿ ಪೂಜೆ, ಅಡ್ಡಪಲ್ಲಕ್ಕಿ ಇತ್ಯಾದಿ ವಿಷಯಗಳಲ್ಲಿ ತಮ್ಮದೇ ಆದ ನಿಲುವು ಪ್ರತಿಪಾದಿಸುತ್ತಿದ್ದರು. ಅವರ ಹತ್ಯೆಯ ವಿಷಯದಲ್ಲಿ ಬರೀ ಹಿಂದೂ ಸಂಘಟನೆಗಳತ್ತ ಬೊಟ್ಟು ಮಾಡುತ್ತಿರುವ ನೀವು(ಪ್ರಗತಿಪರ ಚಿಂತಕರು) ಲಿಂಗಾಯತ ಮಠಾಧೀಶರು ಮತ್ತು ಸಂಘಟನೆಗಳ ವಿರುದ್ಧವೂ ತನಿಖೆಯಾಗಲೆಂದು ಏಕೆ ಆಗ್ರಹಿಸುತ್ತಿಲ್ಲ? ಎಂದು ಶ್ರೀರಾಮಸೇನೆ ಅಧ್ಯಕ್ಷ  ಪ್ರಮೋದ್ ಮುತಾಲಿಕ್ ಪ್ರಶ್ನಿಸುತ್ತಾರೆ.

ಚಂಪಾ ತಿರುಗೇಟು:
"ಲಿಂಗಾಯತ ಧರ್ಮ ಈ ನೆಲದ ಧರ್ಮವೆಂದು ಕಲಬುರ್ಗಿ ಪ್ರತಿಪಾದಿಸುತ್ತಾ ಬಂದಿದ್ದರು. ವೀರಶೈವ ಲಿಂಗಾಯತಕ್ಕೆ ಅವರ ಆಕ್ಷೇಪಣೆ ಇತ್ತು. ಹಿಂದೂ ಮೂಲಭೂತವಾದದಲ್ಲಿ ವೀರಶೈವ ಮೂಲಭೂತವಾದದ ಬೇರುಗಳಿದ್ದವು. ಶರಣರ ವೇಷದ ವೈದಿಕರು, ವೀರಶೈವ ಹೆಸರಿನ ಹಿಂದೂ ಮೂಲಭೂತವಾದಿಗಳು ಕಾಣಸಿಗುತ್ತಿದ್ದರು. ಹಾಗಾಗಿ ಮಠಗಳನ್ನು ತನಿಖೆಗೆ ಒಳಪಡಿಸಲಿ ಎಂದು ಮುತಾಲಿಕ್ ಹೇಳಿರುವುದು ಅವರೂ ನಮ್ಮ ದಾರಿಗೆ ಬಂದಂತಾಗಿದೆ. ಮೂಲಭೂತವಾದಿಗಳಿಂದ ಹತ್ಯೆ ನಡೆದಿದೆ ಎಂಬುವುದನ್ನು ನಾವೂ ಒಪ್ಪಿಕೊಳ್ಳುತ್ತೇವೆ, ಅವರೂ ಅದನ್ನೇ ಹೇಳುತ್ತಿದ್ದಾರೆ," ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios