ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಗೂಳಿಹಟ್ಟಿಶೇಖರ್‌ ಅವರಿಂದ ಒಂದು ಕೋಟಿ ರು. ಪಡೆದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಒಬ್ಬ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು : ಆನೇಕಲ್‌ ತಾಲೂಕಿನಲ್ಲಿ 10 ಎಕರೆ ಜಮೀನು ಮಾರಾಟದ ನೆಪದಲ್ಲಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಗೂಳಿಹಟ್ಟಿಶೇಖರ್‌ ಅವರಿಂದ ಒಂದು ಕೋಟಿ ರು. ಪಡೆದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಒಬ್ಬ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ವಂಚನೆ ಸಂಬಂಧ ಯಲಚೇನಹಳ್ಳಿ ನಿವಾಸಿ ನಾರಾಯಣರೆಡ್ಡಿ, ಅವರ ಪತ್ನಿ ಭಾಗ್ಯ ಹಾಗೂ ಅವರ ಅತ್ತೆ ಪದ್ಮಾವತಿ ವಿರುದ್ಧ ಜೂ.26 ರಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಶಾಸಕರು ದೂರು ನೀಡಿದ್ದಾರೆ.

ಗ್ರಾನೈಟ್‌ ಉದ್ಯಮದಲ್ಲಿ ತೊಡಗಿರುವ ಶಾಸಕ ಗೂಳಿಹಟ್ಟಿಶೇಖರ್‌ ಅವರು, ಕೆಲ ತಿಂಗಳ ಹಿಂದೆ ಗ್ರಾನೈಟ್‌ ದಾಸ್ತಾನು ಮಾಡುವ ಸಲುವಾಗಿ ಆನೇಕಲ್‌ ತಾಲೂಕಿನಲ್ಲಿ ಜಮೀನು ಖರೀದಿಗೆ ಯತ್ನಿಸಿದ್ದಾಗ ವಂಚನೆಗೊಳಗಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನನಗೆ ಮಧ್ಯವರ್ತಿಗಳ ಮೂಲಕ ನಾರಾಯಣರೆಡ್ಡಿ ಪರಿಚಯವಾಗಿತ್ತು. ಗ್ರಾನೈಟ್‌ ಸ್ಟಾಕ್‌ ಯಾರ್ಡ್‌ ಸಲುವಾಗಿ ಆನೇಕಲ್‌ ತಾಲೂಕಿನಲ್ಲಿ ಜಮೀನು ಹುಡುಕಾಟ ನಡೆಸಿದ್ದೆ. ಆಗ ನಾರಾಯಣ ರೆಡ್ಡಿ, ಆನೇಕಲ್‌ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಸರ್ವೆ ನಂ.148ರಲ್ಲಿನ 10 ಎಕರೆ ಭೂಮಿ ಕೊಡಿಸುವುದಾಗಿ ಹೇಳಿದ್ದ. ಈ ಜಾಗವು ತನ್ನ ಪತ್ನಿ ಮತ್ತು ಅತ್ತೆ ಹೆಸರಿನಲ್ಲಿದ್ದು, ನಿಮಗೆ ಕರಾರು ಮಾಡಿಕೊಡುವುದಾಗಿ ತಿಳಿಸಿದ್ದ. ನಾನು ಆ ಭೂಮಿ ಪರಿಶೀಲಿಸಿದ ಬಳಿಕ ಸ್ಟಾಕ್‌ ಯಾರ್ಡ್‌ಗೆ ಸೂಕ್ತವಾಗಿದೆ ಎಂದು ಖರೀದಿಸಲು ಇಚ್ಛಿಸಿದ್ದೆ ಎಂದು ಶಾಸಕರು ಹೇಳಿದ್ದಾರೆ.

ತಾನು ಆ ಜಾಗ ಖರೀದಿಗೆ ಸಲುವಾಗಿ ಆರ್‌ಟಿಜಿಎಸ್‌ ಮೂಲಕ 50 ಲಕ್ಷ ರು. ಹಾಗೂ ನಗದು 50 ಲಕ್ಷ ರು. ಹಣವನ್ನು ನಾರಾಯಣ ರೆಡ್ಡಿ ಅವರಿಗೆ ನೀಡಿದ್ದೆ. ಹಣ ಕೊಟ್ಟಿದ್ದಕ್ಕೆ ನಾರಾಯಣ ಅವರ ಪತ್ನಿ, ತಾಯಿ, ಅತ್ತೆ ಅವರಿಂದ ಒಪ್ಪಂದ ಕರಾರು ಪತ್ರಕ್ಕೆ ಸಹಿ ಮಾಡಿಸಿ, ಆ ಭೂಮಿಗೆ ಜಿಪಿಎ ಸಹ ಮಾಡಿಕೊಟ್ಟಿದ್ದರು. ಆದರೆ ಕೆಲ ದಿನಗಳ ಬಳಿಕ ನಾರಾಯಣ ರೆಡ್ಡಿ ನೀಡಿದ್ದ ಜಮೀನಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವುಗಳು ನಕಲು ಎಂಬುದು ನನಗೆ ಗೊತ್ತಾಯಿತು ಎಂದು ಗೂಳಿಹಟ್ಟಿಶೇಖರ್‌ ದೂರಿನಲ್ಲಿ ವಿವರಿಸಿದ್ದಾರೆ.

ತಕ್ಷಣವೇ ನಾರಾಯಣರೆಡ್ಡಿ ಯನ್ನು ಸಂಪರ್ಕಿಸಿ ತಾನು ನೀಡಿದ್ದ ಹಣವನ್ನು ಮರಳಿಸುವಂತೆ ಸೂಚಿಸಿದ್ದೆ. ಈ ಮಾತಿಗೆ ದೊಡ್ಡಕಲ್ಲಸಂದ್ರದಲ್ಲಿರುವ ಜಮೀನಿನನ್ನು ಮಾರಾಟಕ್ಕೆ ಇಟ್ಟಿದ್ದೇನೆ. ಆ ಭೂಮಿ ಮಾರಾಟ ಮಾಡಿ ಬಂದ ಹಣದಲ್ಲಿ ನಿಮ್ಮ ಹಣ ಹಿಂತಿರುಗಿಸುವುದಾಗಿ ರೆಡ್ಡಿ ಭರವಸೆ ಕೊಟ್ಟಿದ್ದ. ಈಗ ಹಣ ಕೇಳಿದರೆ ನೀವು ಏನ್‌ ಬೇಕಾದರೂ ಮಾಡಿಕೊಳ್ಳಿ. ತನ್ನಲ್ಲಿ ಹಣವಿಲ್ಲ ಎನ್ನುತ್ತಾನೆ. ತನಗೆ ವಂಚಿಸಿರುವ ನಾರಾಯಣರೆಡ್ಡಿ ಹಾಗೂ ಆತನ ಕುಟುಂಬದ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಗೂಳಿಹಟ್ಟಿಶೇಖರ್‌ ಕೋರಿದ್ದಾರೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಶಾಸಕ ಗೂಳಿಹಟ್ಟಿಶೇಖರ್‌ ಅವರು ನೆಲೆಸಿದ್ದು, ಈಗ ವಂಚನೆ ಸಂಬಂಧ ತಮ್ಮ ಮನೆ ಹತ್ತಿರದ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ ಗ್ರಾನೈಟ್‌ ಸ್ಟಾಕ್‌ ಯಾರ್ಡ್‌ ಆರಂಭಕ್ಕೆ ನಾರಾಯಣರೆಡ್ಡಿ ಅವರಿಂದ ಭೂಮಿ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಕೆನರಾ ಬ್ಯಾಂಕ್‌ ಹಾಗೂ ಮೀಟರ್‌ ಬಡ್ಡಿದಾರರರಿಂದ ಸಾಲ ಪಡೆದು ರೆಡ್ಡಿಗೆ ಹಣ ನೀಡಿದ್ದೆ. ಆದರೆ ನಕಲು ಭೂ ದಾಖಲೆ ನೀಡಿ ವಂಚಿಸಿದ್ದಾನೆ.

-ಗೂಳಿಹಟ್ಟಿಶೇಖರ್‌, ಶಾಸಕ