Asianet Suvarna News Asianet Suvarna News

ಶೃಂಗೇರಿ ಶ್ರೀ ಸಿಂಹಾಸನ ತೆಗೆಸಿದರೇ ಕೇರಳ ಸಚಿವ?

ಕೇರಳ ಪ್ರವಾಸದಲ್ಲಿರುವ ಶೃಂಗೇರಿ ಶ್ರೀಗಳಿಗೆ ಮೀಸಲಾಗಿದ್ದ ಸಿಂಹಾಸನ ತೆಗೆಸಿ ಕೇರಳದ ಹಾಲಿ ಮುಜರಾಯಿ ಸಚಿವರು ಹಾಗೂ ಮಾಜಿ ಮುಜರಾಯಿ ಸಚಿವರು ಅವಮಾನ ಮಾಡಿದರು ಎಂಬ ಮಲಯಾಳಿ ಮಾಧ್ಯಮವೊಂದರ ವರದಿ ವಿವಾದ ಸೃಷ್ಟಿಸಿದ ಪ್ರಸಂಗ ಮಂಗಳವಾರ ನಡೆದಿದೆ. ಆದರೆ ವಾಸ್ತವವಾಗಿ ಈ ರೀತಿ ಘಟನೆ ನಡೆದಿಲ್ಲ ಎಂದು ಸಚಿವರು ಹಾಗೂ ಮಠದ ಸಿಬ್ಬಂದಿ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ. ಆದಾಗ್ಯೂ ಸಚಿವರ ನಿಲುವಿಗೆ ಭಾರಿ ವಾದ-ಪ್ರತಿವಾದಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆದಿವೆ. ಶೃಂಗೇರಿ ಹಿರಿಯ ಶ್ರೀಗಳಾದ ಭಾರತೀತೀರ್ಥ ಜಗದ್ಗುರುಗಳು ಹಾಗೂ ವಿಧುಶೇಖರ ಭಾರತಿ ಸ್ವಾಮೀಜಿ ಜೂನ್‌ 10ರಿಂದ 30ರವರೆಗೆ ಕೇರಳ ಪ್ರವಾಸದಲ್ಲಿದ್ದಾರೆ.

Minister Reportedly Removes Simhasana Meant for Sringeri Sri

ತಿರುವನಂತಪುರಂ/ ಬೆಂಗಳೂರು: ಕೇರಳ ಪ್ರವಾಸದಲ್ಲಿರುವ ಶೃಂಗೇರಿ ಶ್ರೀಗಳಿಗೆ ಮೀಸಲಾಗಿದ್ದ ಸಿಂಹಾಸನ ತೆಗೆಸಿ ಕೇರಳದ ಹಾಲಿ ಮುಜರಾಯಿ ಸಚಿವರು ಹಾಗೂ ಮಾಜಿ ಮುಜರಾಯಿ ಸಚಿವರು ಅವಮಾನ ಮಾಡಿದರು ಎಂಬ ಮಲಯಾಳಿ ಮಾಧ್ಯಮವೊಂದರ ವರದಿ ವಿವಾದ ಸೃಷ್ಟಿಸಿದ ಪ್ರಸಂಗ ಮಂಗಳವಾರ ನಡೆದಿದೆ. ಆದರೆ ವಾಸ್ತವವಾಗಿ ಈ ರೀತಿ ಘಟನೆ ನಡೆದಿಲ್ಲ ಎಂದು ಸಚಿವರು ಹಾಗೂ ಮಠದ ಸಿಬ್ಬಂದಿ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ. ಆದಾಗ್ಯೂ ಸಚಿವರ ನಿಲುವಿಗೆ ಭಾರಿ ವಾದ-ಪ್ರತಿವಾದಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆದಿವೆ. ಶೃಂಗೇರಿ ಹಿರಿಯ ಶ್ರೀಗಳಾದ ಭಾರತೀತೀರ್ಥ ಜಗದ್ಗುರುಗಳು ಹಾಗೂ ವಿಧುಶೇಖರ ಭಾರತಿ ಸ್ವಾಮೀಜಿ ಜೂನ್‌ 10ರಿಂದ 30ರವರೆಗೆ ಕೇರಳ ಪ್ರವಾಸದಲ್ಲಿದ್ದಾರೆ.

ಈ ನಿಮಿತ್ತ ಸೋಮವಾರ ತಿರುವನಂತಪುರದ ಮಿತ್ರಾನಂದಪುರಂ ಮಹಾವಿಷ್ಣು ದೇಗುಲದಲ್ಲಿನ ಪುಷ್ಕರಣಿಯಲ್ಲಿ ನಡೆದ ಗಂಗಾಪೂಜೆಯನ್ನು ಶೃಂಗೇರಿ ಕಿರಿಯ ಯತಿಗಳಾದ ವಿಧುಶೇಖರ ಭಾರತಿ ಸ್ವಾಮೀಜಿ ನೆರವೇರಿಸಬೇಕಿತ್ತು.
ಮಲಯಾಳಿ ಪತ್ರಿಕೆಯೊಂದು ಈ ಕುರಿತು ವರದಿ ಮಾಡಿ, ‘ಪುಷ್ಕರಣಿಯಲ್ಲಿ ಗಂಗಾಪೂಜೆ ಏರ್ಪಾಡಾಗಿತ್ತು. ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ವಿಧುಶೇಖರ ಶ್ರೀಗಳಿಗಾಗಿ ದೊಡ್ಡ ಸಿಂಹಾಸನವನ್ನು ತಂದಿಡಲಾಗಿತ್ತು. ಇದೇ ಸಮಾರಂಭದಲ್ಲಿ ಎಡರಂಗ ಮುಖಂಡ, ಹಾಲಿ ಮುಜರಾಯಿ (ದೇವಸ್ವಂ) ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಹಾಗೂ ಕಾಂಗ್ರೆಸ್‌ ಶಾಸಕ, ಮಾಜಿ ಮುಜರಾಯಿ ಸಚಿವ ವಿ.ಎಸ್‌. ಶಿವಕುಮಾರ್‌ ಪಾಲ್ಗೊಂಡಿದ್ದರು.

ಇನ್ನೂ ವಿಧುಶೇಖರರು ಸಮಾರಂಭಕ್ಕೆ ಆಗಮಿಸಿರಲಿಲ್ಲ. ಆಗಲೇ ವೇದಿಕೆ ಏರಿದ ಸುರೇಂದ್ರನ್‌ ಮತ್ತು ಶಿವಕುಮಾರ್‌ ಅವರು ವೇದಿಕೆ ಮೇಲಿದ್ದ ಸಿಂಹಾಸನ ನೋಡಿ, ಇದ್ಯಾರಿಗೆ ಎಂದು ಪ್ರಶ್ನಿಸಿದರು.ಆಗ ಇದು ಸ್ವಾಮೀಜಿಗಳಿಗೆ ಎಂದು ಸಂಘಟಕರು ಉತ್ತರಿಸಿದರು. ಆಗ ಸಚಿವ ಮತ್ತು ಶಾಸಕರು, ‘ಇಲ್ಲಿ ಎಲ್ಲರೂ ಸಮಾನರು. ವಿವಿಐಪಿ ಸಂಸ್ಕೃತಿ, ಭೇದ-ಭಾವ ಬೇಡ' ಎಂದು ಹೇಳಿ ಸ್ವಾಮೀಜಿಗಳಿಗಿದ್ದ ಸಿಂಹಾಸನ ತೆಗೆಸಿ ಅಲ್ಲಿ ಮಾಮೂಲಿ ಪ್ಲಾಸ್ಟಿಕ್‌ ಕುರ್ಚಿಗಳನ್ನು ಇರಿಸಿದರು' ಎಂದು ಹೇಳಿದೆ. ಸಿಂಹಾಸನ ತೆಗೆದ ವಿಷಯ ತಿಳಿದ ಸ್ವಾಮೀಜಿ, ಸಮಾರಂಭದಲ್ಲಿ ಪಾಲ್ಗೊಳ್ಳದೇ ಕೇವಲ ಗಂಗಾಪೂಜೆ ಮಾತ್ರ ಮಾಡಿ ಅಲ್ಲಿಂದ ತೆರಳಿದರು ಎಂದು ವರದಿ ಹೇಳಿದೆ.

ಬಳಿಕ ಇದಕ್ಕೆ ಸಂಬಂಧಿಸಿದಂತೆ ಕೆಲ ಕೇರಳದ ಕಾಂಗ್ರೆಸ್‌ ಶಾಸಕರು ಮತ್ತು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸಿಸಿ, ‘ಸಚಿವರ ನಡೆ ಸೂಕ್ತವಾಗಿತ್ತು' ಎಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಸ್ವಾಮೀಜಿಗಳಿಗೆ ಕಾಂಗ್ರೆಸ್‌ ಮತ್ತು ಎಡರಂಗದವರು ಅವಮಾನ ಮಾಡಿದ್ದಾರೆ. ಅವರು ಕ್ಷಮೆ ಯಾಚಿಸಬೇಕು' ಎಂದು ಬಿಜೆಪಿ ಮುಖಂಡರಾದ ಬಿ.ಎಸ್‌. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ಸಿ.ಟಿ. ರವಿ ಸೇರಿ ಅನೇಕ ಮುಖಂಡರು, ಹಲವು ಸಾರ್ವಜನಿಕರು ಕಿಡಿಕಾರಿದ್ದಾರೆ.

ಸಚಿವರ ನಕಾರ: ಈ ವರದಿಯ ಕುರಿತು ‘ಕನ್ನಡಪ್ರಭ'ವು ದೂರವಾಣಿಯಲ್ಲಿ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಅವರನ್ನೇ ಸಂಪರ್ಕಿಸಿ ಮಾತನಾಸಿಡಿದಾಗ, ಅವರು ಮಾಧ್ಯಮ ವರದಿಯನ್ನು ನಿರಾಕರಿಸಿದರು. ‘ನಾನು ಹೋದ ಸಮಾರಂಭ ಪುಷ್ಕರಣಿ ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡುವ ಸರ್ಕಾರಿ ಸಮಾರಂಭವಾಗಿತ್ತು. ಸಮಾರಂಭದ ವೇದಿಕೆಯ ಮೇಲೆ ಸಿಂಹಾ ಸನ ಇರಿಸಲಾಗಿತ್ತು. ವಾಸ್ತವವಾಗಿ ನಾನು ಪಾಲ್ಗೊಂಡ ಸಮಾರಂಭಕ್ಕೆ ಆಮಂತ್ರಣ ಸ್ವಾಮೀಜಿ ಅವರಿಗೆ ಇರಲಿಲ್ಲ. ಅವರು ಸಂಜೆಯ ಸಮಾರಂಭ (ಗಂಗಾಪೂಜೆಗೆ) ಬರುವವರಿದ್ದರು. ಹೀಗಾಗಿ ವೇದಿಕೆಯ ಮೇಲೆ ಸಿಂಹಾಸನದ ಅಗತ್ಯ ಇಲ್ಲ. ಮಾಮೂಲಿ ಕುರ್ಚಿಗಳೇ ಸಾಕು ಎಂದು ನಾನು ಮತ್ತು ಶಾಸಕ ಶಿವಕುಮಾರ್‌ ತೆಗೆದಿರಿಸಿದೆವು' ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ‘ಯಾರಿಗೂ ಸಿಂಹಾಸನ ಬೇಡ. ಸರ್ಕಾರಿ ಸಮಾರಂಭಗಳಲ್ಲಿ ಇಂಥ ಸಿಂಹಾಸನಗಳ ಅಗತ್ಯ ಇಲ್ಲ. ಅದು ಯಾರೇ ಧಾರ್ಮಿಕ ನಾಯಕರಾಗಿರಲಿ' ಎಂದೂ ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಅಭಿಪ್ರಾಯಕ್ಕೆ ಭಾರೀ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ.

ಮಠ ಹೇಳುವುದೇನು?: ಈ ಬಗ್ಗೆ ಶೃಂಗೇರಿ ಮಠವನ್ನು ‘ಕನ್ನಡಪ್ರಭ' ಸಂಪರ್ಕಿಸಿದಾಗ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ‘ವಿಧುಶೇಖರ ಭಾರತಿ ಸ್ವಾಮೀಜಿಗಳು ಗಂಗಾಪೂಜೆಗೆ ತೆರಳಿದ್ದರು. ಅವರು ಗಂಗಾಪೂಜೆ ನೆರವೇರಿಸುವ ಹೊತ್ತಿಗೆ ವೇದಿಕೆಯ ಮೇಲೆ ಸಮಾರಂಭ ಆರಂಭವಾಗಿತ್ತು. ಹೀಗಾಗಿ ಮಧ್ಯದಲ್ಲಿ ಸಮಾರಂಭಕ್ಕೆ ಹೋಗುವುದು ಸರಿಯಲ್ಲ ಎಂದು ಅವರು ವಾಪಸು ಮರಳಿದರು' ಎಂದು ಹೇಳಿದ್ದಾರೆ.

‘ವಾಸ್ತವವಾಗಿ ಜಗದ್ಗುರುಗಳು ಯಾವುದೇ ಸಿಂಹಾಸನದ ಮೇಲೆ ಕೂಡುವುದಿಲ್ಲ. ಮಠದಿಂದ ಒಯ್ಯಲಾಗುವ ಪೀಠದ ಮೇಲಷ್ಟೇ ಅವರು ಕೂಡುತ್ತಾರೆ. ಹೀಗಾಗಿ ಸಿಂಹಾಸನವನ್ನು ಸಚಿವರು ತೆಗೆಸಿಹಾಕಿದರು ಎಂದು ಅಸಮಾಧಾನಗೊಂಡು ಕಿರಿಯ ಶ್ರೀಗಳು ಅಲ್ಲಿಂದ ತೆರಳಿದರು ಎಂಬ ಮಾಧ್ಯಮವೊಂದರ ವರದಿ ಉತ್ಪ್ರೇಕ್ಷೆಯಿಂದ ಕೂಡಿದೆ' ಎಂದಿದ್ದಾರೆ.

Follow Us:
Download App:
  • android
  • ios