ತೆರಿಗೆ ವಂಚನೆಯ ಉದ್ದೇಶದಿಂದಲೇ ಸ್ಥಾಪಿಸಿರುವ ಕಂಪೆನಿಗಳ (ಷೆಲ್‌ ಕಂಪೆನಿಗಳ) ನಿರ್ದೇಶಕ ಹುದ್ದೆಯಿಂದ ಅನರ್ಹಗೊಂಡಿರುವವರ ಪಟ್ಟಿಯಲ್ಲಿ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಮುಖ ಉದ್ಯಮಿಗಳು ಮತ್ತು ಅವರ ಕುಟುಂಬದ ಸದಸ್ಯರು ಇದ್ದಾರೆ.
ಬೆಂಗಳೂರು (ಸೆ.21): ತೆರಿಗೆ ವಂಚನೆಯ ಉದ್ದೇಶದಿಂದಲೇ ಸ್ಥಾಪಿಸಿರುವ ಕಂಪೆನಿಗಳ (ಷೆಲ್ ಕಂಪೆನಿಗಳ) ನಿರ್ದೇಶಕ ಹುದ್ದೆಯಿಂದ ಅನರ್ಹಗೊಂಡಿರುವವರ ಪಟ್ಟಿಯಲ್ಲಿ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಮುಖ ಉದ್ಯಮಿಗಳು ಮತ್ತು ಅವರ ಕುಟುಂಬದ ಸದಸ್ಯರು ಇದ್ದಾರೆ.
ಸಹಕಾರಿ ಸಚಿವ ರಮೇಶ್ ಜಾರಕಿಹೊಳಿ, ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರ ಪತ್ನಿ ಮತ್ತು ಮಕ್ಕಳು, ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್, ಉದ್ಯಮಿ ದಿನೇಶ್ ಸಿಪಾನಿ ಸೇರಿದ್ದಾರೆ. ಕಂಪೆನಿ ವ್ಯವಹಾರ ಸಚಿವಾಲಯವು (ಎಂಸಿಎ) ಅಧಿಸೂಚನೆ ಹೊರಡಿಸಿದ ದಿನದಿಂದ 5 ವರ್ಷಗಳವರೆಗೆ ಇವರೆಲ್ಲ ನಿರ್ದೇಶಕ ಹುದ್ದೆಗೆ ಎರವಾಗಲಿದ್ದಾರೆ. ಕಂಪನಿ ಕಾಯ್ದೆ 2013ರ ಸೆಕ್ಷನ್ 164(2)(ಎ) ಅನ್ವಯ ‘ಎಂಸಿಎ’, ಅನರ್ಹಗೊಂಡ ನಿರ್ದೇಶಕರ ಹೆಸರುಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ. ಇದರಲ್ಲಿ ರಾಜ್ಯದ ಕಂಪೆನಿ ರಿಜಿಸ್ಟ್ರಾರ್ ವ್ಯಾಪ್ತಿಗೆ ಬರುವ 21,798 ನಿರ್ದೇಶಕರು ಇದ್ದಾರೆ.
ಅನರ್ಹ ನಿರ್ದೇಶಕರ ಪಟ್ಟಿಯಲ್ಲಿ, ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಷುಗರ್ಸ್ ಕಂಪನಿಯ ನಿರ್ದೇಶಕರಾದ ಸಚಿವ ರಮೇಶ್ ಜಾರಕಿಹೊಳಿ ಅವರ ಕುಟುಂಬದ ಸದಸ್ಯರು ಇದ್ದಾರೆ. ಈ ಕಂಪನಿಯು 2006ರ ಏಪ್ರಿಲ್ 13ರಂದು ಅಸ್ತಿತ್ವಕ್ಕೆ ಬಂದಿತ್ತು. ಕೊನೆಯದಾಗಿ 2010ರ ಜೂನ್ 21ರಂದು ವಾರ್ಷಿಕ ಸರ್ವ ಸದಸ್ಯರ ಸಭೆ ನಡೆದಿತ್ತು. ಜಗದೀಶ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್, ಮಕ್ಕಳಾದ ಸಂಕಲ್ಪ ಮತ್ತು ಪ್ರಶಾಂತ್ ಶೆಟ್ಟರ್ ಅವರೂ ಅನರ್ಹಗೊಂಡಿದ್ದಾರೆ. 2011ರಲ್ಲಿ ಸ್ಥಾಪಿಸಿದ್ದ ಜಗದೀಶ ಷುಗರ್ಸ್ ಕಂಪನಿಯು ಕೂಡ ವಾರ್ಷಿಕ ಲೆಕ್ಕಪತ್ರ ಸಲ್ಲಿಸಿಲ್ಲ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಜಗದೀಶ ಶೆಟ್ಟರ್, ‘ ನಮ್ಮ ಕುಟುಂಬದ ಒಡೆತನದಲ್ಲಿ ಇರುವ ಕಂಪನಿಯಲ್ಲಿ ಯಾವುದೇ ವಹಿವಾಟು ನಡೆಯದಿರುವುದನ್ನು ನಾವು ಈ ಮೊದಲೇ ಸರ್ಕಾರದ ಗಮನಕ್ಕೆ ತಂದಿದ್ದೇವು’ ಎಂದು ಹೇಳಿದ್ದಾರೆ.
