ಬೆಂಗಳೂರು[ಜೂ.23]: ಸಚಿವ ಸಂಪುಟ ವಿಸ್ತರಣೆ ಮಾಡಿ ವಾರ ಕಳೆದರೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿರುವ ನೂತನ ಸಚಿವ ಆರ್‌.ಶಂಕರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬೇಟಿ ಮಾಡಿ ಅಸಮಾಧಾನ ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಶನಿವಾರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಆರ್‌.ಶಂಕರ್‌, ಕೆಲ ಹೊತ್ತು ಚರ್ಚೆ ನಡೆಸಿ, ಖಾತೆ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Exclusive: ನೂತನ ಸಚಿವರಿಗೆ ಖಾತೆ ಫಿಕ್ಸ್! ಸಿಎಂ ಕ್ಯಾತೆಗೆ ದೋಸ್ತಿ ಸುಸ್ತು!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಖಾತೆ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ನನಗೂ ಸ್ವಲ್ಪ ಬೇಸರವಿದೆ. ಈ ಸಂಬಂಧ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ನಗರಕ್ಕೆ ವಾಪಸಾಗಲಿದ್ದಾರೆ, ಬಂದ ಬಳಿಕ ಖಾತೆ ಹಂಚಿಕೆ ಅಂತಿಮಗೊಳಿಸುತ್ತಾರೆ ಎಂಬ ವಿಶ್ವಾಸವಿದೆ. ನೋಡೋಣ ಸದ್ಯದಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದರು.

'ನನಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸಲ್ಲ'

ಖಾತೆ ಹಂಚಿಕೆ ವಿಚಾರದಲ್ಲಿ ನನ್ನದೇನೂ ಸಮಸ್ಯೆ ಇಲ್ಲ. ನನಗೆ ಕಾಂಗ್ರೆಸ್‌ ಪಕ್ಷದಲ್ಲಿರುವ ಖಾತೆಯನ್ನೇ ಕೊಡಬಹುದು. ಆದರೆ, ಸಚಿವ ನಾಗೇಶ್‌ ಅವರಿಗೆ ಮಾತ್ರ ಜೆಡಿಎಸ್‌ನಲ್ಲಿರುವ ಖಾತೆ ಕೊಡಬೇಕಿದೆ. ಹಾಗಾಗಿ ವಿಳಂಬ ಆಗುತ್ತಿರಬಹುದು. ನಾಗೇಶ್‌ ಅವರ ಖಾತೆ ಅಂತಿಮಗೊಂಡ ಮೇಲೆ ಇಬ್ಬರಿಗೂ ಖಾತೆ ಕೊಡಬಹುದು. ನೋಡೋಣ ಮುಖ್ಯಮಂತ್ರಿ ಅವರು ಬಂದ ಮೇಲೆ ಎಲ್ಲವೂ ಗೊತ್ತಾಗುತ್ತದೆ ಎಂದರು.