ಬೆಂಗಳೂರು[ಜೂ.19]: ಕೆಪಿಜೆಪಿಯಿಂದ ಸದ್ಯ ಗೆದ್ದಿರುವುದು ನಾನೊಬ್ಬ ಮಾತ್ರ. ಮೂರನೇ ಒಂದು ಭಾಗದಷ್ಟು ಮಂದಿ ಪಕ್ಷ ಸೇರ್ಪಡೆಯಾದರೆ ಪಕ್ಷಾಂತರ ಕಾಯಿದೆ ಅನ್ವಯಿಸುವುದಿಲ್ಲ. ಇದರಂತೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಯಮಬದ್ಧವಾಗಿ ಸೇರಿದ್ದೇನೆ ಎಂದು ನೂತನ ಸಚಿವ ಹಾಗೂ ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್. ಶಂಕರ್ ಹೇಳಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ ಅವರು, ಕಾನೂನು ಪ್ರಕಾರ ಪಕ್ಷ ಸೇರ್ಪಡೆ ಹಾಗೂ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಕೆಪಿಜೆಪಿಯಿಂದ ಗೆದ್ದಿರುವುದು ನಾನೊಬ್ಬ ಮಾತ್ರ. ನಿಯಮದ ಪ್ರಕಾರ ನಾನು ಕಾಂಗ್ರೆಸ್ ಸೇರಿದ್ದೇನೆ. ನನಗೆ ಯಾವ ಖಾತೆ ದೊರೆಯಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಪೌರಾಡಳಿತ ಖಾತೆ ಮಾತ್ರ ಖಾಲಿ ಇದೆ. ಹೀಗಾಗಿ ಪೌರಾಡಳಿತ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದರು.

ದಿನೇಶ್ ಗುಂಡೂರಾವ್ ಭೇಟಿ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಸೇರುವುದರ ಬಗ್ಗೆ ಮೌಖಿಕವಾಗಿ ಚರ್ಚೆ ಮಾಡಿದ್ದೇನೆ. ನಾನು ಈಗಾಗಲೇ ಪಕ್ಷದ ಜತೆಗೆ ಇದ್ದೇನೆ. ಮುಂದೆ ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನೇನು ಪ್ರಕ್ರಿಯೆ ನಡೆಸಬೇಕೋ ಅದನ್ನು ನಡೆಸುತ್ತಿದ್ದೇನೆ ಎಂದು ಹೇಳಿದರು.