ಚಿಕ್ಕಮಗಳೂರು (ಡಿ.17): ನಾಲ್ಕು ತಾಲೂಕುಗಳಲ್ಲಿ ಬರ, 39 ಗ್ರಾಮಗಳಲ್ಲಿ ನೀರಿನ ಹಾಹಾಕಾರ, ಮುಂದೆ 364 ಗ್ರಾಮಗಳಲ್ಲಿ ನೀರಿಗೆ ಬರ, ೬೪,೪೫೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ. ಇಂತಹ ಭೀಕರ ಬರಗಾಲದ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಶನಿವಾರ ಜಿಲ್ಲೆಗೆ ಬಂದಿದ್ದ ಸಚಿವ ಸಂಪುಟದ ಉಪ ಸಮಿತಿ ಪ್ರವಾಸದ ಬದಲು ಸಭೆ ಮಾಡಿತು.

ಚಿಕ್ಕಮಗಳೂರು (ಡಿ.17): ನಾಲ್ಕು ತಾಲೂಕುಗಳಲ್ಲಿ ಬರ, 39 ಗ್ರಾಮಗಳಲ್ಲಿ ನೀರಿನ ಹಾಹಾಕಾರ, ಮುಂದೆ 364 ಗ್ರಾಮಗಳಲ್ಲಿ ನೀರಿಗೆ ಬರ, ೬೪,೪೫೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ. ಇಂತಹ ಭೀಕರ ಬರಗಾಲದ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಶನಿವಾರ ಜಿಲ್ಲೆಗೆ ಬಂದಿದ್ದ ಸಚಿವ ಸಂಪುಟದ ಉಪ ಸಮಿತಿ ಪ್ರವಾಸದ ಬದಲು ಸಭೆ ಮಾಡಿತು.

ಸಚಿವರಾದ ಕಾಗೋಡು ತಿಮ್ಮಪ್ಪ, ಯು.ಟಿ. ಖಾದರ್ ಹಾಗೂ ಎಚ್.ಎಸ್. ಮಹಾದೇವಪ್ರಸಾದ್ ಅವರು ಮಧ್ಯಾಹ್ನ 3.10 ಕ್ಕೆ ಚಿಕ್ಕಮಗಳೂರಿಗೆ ಆಗಮಿಸಿ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬರ ಅಧ್ಯಯನ ಪರಿಶೀಲನಾ ಸಭೆಯಲ್ಲಿ ಹಾಜರಾದರು.

ಸಭೆಯ ಆರಂಭದಲ್ಲಿ ಅಧಿಕಾರಿ ಪ್ರೋಜಕ್ಟರ್ ಮೂಲಕ ಅಂಕಿ ಅಂಶದ ಬಗ್ಗೆ ವಿವರಣೆ ನೀಡಲು ಮುಂದಾಗುತ್ತಿದ್ದಂತೆ ಹಿರಿಯ ಸಚಿವರೋರ್ವರು, ಇದೆಲ್ಲಾ ನೋಡಕ್ಕೆ ಬಂದಿಲ್ಲ, ಅಂಕಿಅಂಶ ಕೊಡ್ರಿ ಸಾಕೆಂದು ತಮ್ಮ ಉದಾಶೀನತೆಯಲ್ಲಿ ಹೊರ ಹಾಕಿದರು.

ಈ ಸಭೆಗೆ ಹಾಜರಾಗಲು ಸುಮಾರು 100 ಕಿ.ಮೀ. ದೂರದಲ್ಲಿರುವ ತಾಲೂಕು ಕೇಂದ್ರಗಳಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿದ್ದರು. ಇದಕ್ಕಾಗಿ ಕಳೆದ ಒಂದು ವಾರಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದರು. ಶನಿವಾರ ಬೆಳ್ಳಂಬೆಳಿಗ್ಗೆ ಹೊರಟು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಆದರೆ, ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದೊಳಗೆ ಕುಳಿತುಕೊಳ್ಳಲು ಜಾಗ ಇಲ್ಲದೆ ಹೊರಗಿದ್ದ ಕುರ್ಚಿಗಳಲ್ಲಿ ಕುಳಿತುಕೊಂಡಿದ್ದರು. ಈ ರೀತಿಯ ಪರಿಸ್ಥಿತಿ ಬಂದಿದ್ದು, ಒಂದಿಬ್ಬರು ಅಧಿಕಾರಿಗಳಿಗಲ್ಲ, ಬಹಳಷ್ಟು ಅಧಿಕಾರಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತು, ಕೊನೆಯಲ್ಲಿ ಸಂಜೆ ೫ ಗಂಟೆಗೆ ಸಭೆ ಮುಗಿಸಿ ಸಚಿವರು ತೆರಳುತ್ತಿದ್ದಂತೆ ಅಧಿಕಾರಿಗಳು ನಿರ್ಗಮಿಸಿದರು.

ಅಂಕಿ ಅಂಶ ಕ್ರೋಡೀಕರಣ

ಸಚಿವರು, ಅಂಕಿಅಂಶ ಸಂಗ್ರಹ ಮಾಡಲು ನೂರಾರು ಕಿ.ಮೀ.ದೂರದಿಂದ ಬರುವ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆ ಅಧಿಕಾರಿಗಳ ಹಾಗೂ ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿತ್ತು.

ಅಧಿಕಾರಿಗಳು ತಮ್ಮ ಕಚೇರಿಯ ಕೆಲಸ ಬಿಟ್ಟು, ವಾಹನಗಳಿಗೆ ಡಿಸೇಲ್ ಹಾಕಿಸಿ ತರಾತುರಿಯಲ್ಲಿ ಬಂದು ಸಭೆಯ ಹೊರಗೆ ಕುಳಿತು ಎದ್ದು ಹೋದರು. ಸಚಿವರು ಯಾವುದೇ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ.

ಬರ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 60 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಸಂಪುಟದ ಈ ಸಮಿತಿ ಹೋದ ಕಡೆಯೆಲ್ಲಾ ಹೇಳುತ್ತಾ ಬಂದಿದೆ. ಸಚಿವರು ಚಿಕ್ಕಮಗಳೂರಿನಲ್ಲೂ ಇದನ್ನು ಪುನರುಚ್ಚರಿಸಿದರು. ಇನ್ನುಳಿದಂತೆ ಅಧಿಕಾರಿಗಳು ಸಿದ್ದಪಡಿಸಿದ ಬರ ನಿರ್ವಹಣೆಯ ಪುಸ್ತಕ ತೆಗೆದುಕೊಂಡು ಬೆಂಗಳೂರಿಗೆ ನಿರ್ಗಮಿಸಿದರು.

ಕೆಲವು ಅಧಿಕಾರಿಗಳ ಪರಿಸ್ಥಿತಿ ಹೇಗಿತ್ತೆಂದರೆ ಬಂದಿದ್ದು ಹಾಗೆ ಸುಮ್ಮನೆ ಎನ್ನುವಂತ್ತಿತ್ತು. ಬಂದು ಹೊರಗೆ ಕುಳಿತುಕೊಳ್ಳುವುದಾದರೆ ಅಷ್ಟು ದೂರದಿಂದ ಇಲ್ಲಿಗೆ ಬರುವ ಅಗತ್ಯತೆ ಇರಲಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೋರ್ವರು ಕನ್ನಡಪ್ರಭಕ್ಕೆ ತಿಳಿಸಿದರು.