ಉಡುಪಿ[ಅ.25]:  ಹೆಣ್ಣಿಗೆ ಮಾತ್ರವಲ್ಲ ಯಾವ ಪುರುಷನಿಗೂ ಅನ್ಯಾಯ ಆಗಬಾರದು ಎನ್ನುವುದು ನನ್ನ ಆಶಯ ಎಂದು ಸಚಿವೆ, ಚಿತ್ರನಟಿ ಜಯಮಾಮಾ ತಿಳಿಸಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರು ಸಮೀಪದ ನಾಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣಿಗಾಗುವ ಚಿತ್ರಹಿಂಸೆ, ದೌರ್ಜನ್ಯಗಳ ವಿರುದ್ಧ ದನಿಯೆತ್ತಲು ಅಭಿಯಾನ ಬಲ ತಂದುಕೊಟ್ಟಿದೆ. ಹೀಗಾಗಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮುಕ್ತವಾಗಿ ಹೇಳಲು ಮುಂದೆ ಬಂದಾಗ ಆಕೆಗೆ ಬೆಂಬಲ ನೀಡಬೇಕು. ಆದರೆ ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡನ್ನು ದೂಷಿಸುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟರು.

‘ಮೀ ಟೂ’ ಎಂಬ ಹೊಸ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟರ ಮಟ್ಟಿಗೆ ನ್ಯಾಯ ಸಿಗುತ್ತದೆ ಎಂಬುದು ಬಹಳ ಮುಖ್ಯ. ಹೀಗಾಗಿ ಈ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ.  ರಾಜಕೀಯದಲ್ಲಿ ಸಕ್ರಿಯವಾಗಿದ್ದರಿಂದ ಈಗಿನ ಚಿತ್ರರಂಗದ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ನಾನು ನೋಡಿದಂತೆ ನಟ ಅರ್ಜುನ್‌ ಸರ್ಜಾ ಸರಳ, ಸಜ್ಜನ ಹುಡುಗ. ಅರ್ಜುನ್‌ ಸರ್ಜಾ ತಂದೆಯ ಜೊತೆಯೂ ನಾನು ಅಭಿನಯಿಸಿದ್ದೆ. ಈ ಪ್ರಕರಣದಲ್ಲಿ ವಾಣಿಜ್ಯ ಮಂಡಳಿ ಸರಿಯಾದ ತೀರ್ಮಾನಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ನಮ್ಮ ಕಾಲವೇ ಚೆನ್ನಾಗಿತ್ತು:
ಡಾ. ರಾಜ್‌ ಕುಮಾರ್‌ ಅವರ ಕಾಲದಲ್ಲಿ ನಾವೆಲ್ಲಾ ಬೆಳೆದವರು. ನಮ್ಮ ಕಾಲದ ಚಿತ್ರರಂಗ ಸುವರ್ಣ ಯುಗವಾಗಿತ್ತು. ನನ್ನ ಸಿನಿಮಾ ಜೀವನದ 46 ವರ್ಷಗಳಲ್ಲಿ 75 ಸಿನೆಮಾಗಳಲ್ಲಿ ನಟಿಸಿದ್ದೇನೆ. ಒಂದೇ ಒಂದು ಕಹಿ ಘಟನೆ ಇದುವರೆಗೂ ನನ್ನ ಜೀವನದಲ್ಲಿ ನಡೆದಿಲ್ಲ. ಸ್ಯಾಂಡಲ್‌ವುಡ್‌ಗೆ 85 ವರ್ಷಗಳ ಇತಿಹಾಸವಿದ್ದು ಮೀಟೂ ಇದನ್ನು ಇಬ್ಭಾಗ ಮಾಡಲು ಸಾಧ್ಯವಿಲ್ಲ ಎಂದರು.