ಶ್ರೀನಗರ(ಸೆ.21): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ಮುಂಜಾಗೃತಾ ಕ್ರಮವಾಗಿ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ.

ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಕುಟುಂಬಸ್ಥರು ಭೇಟಿಯಾಗುವುದು ದುಸ್ತರವಾಗಿದ್ದು, ಅತ್ಯಂತ ಕಠಿಣ ನಿಲುವುಗಳ ಬಳಿಕವಷ್ಟೇ ಭೇಟಿಗೆ ಅವಕಾಶ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ಈ ನಿಲುವನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಮೋದಿ ತಮ್ಮ ಹುಟ್ಟುಹಬ್ಬದ ದಿನದಂದು ತಮ್ಮ ತಾಯಿಯನ್ನು ಭೇಟಿಯಾಗಿದ್ದು ಸಂತೋಷ, ಆದರೆ ನನಗೆ ಆ ಅವಕಾಶ ಇಲ್ಲದಿರುವುದು ಅಮಾನವೀಯತೆಯ ಪ್ರದರ್ಶನ ಅಲ್ಲವೇ ಎಂದು ಇಲ್ತಿಜಾ ಪ್ರಶ್ನಿಸಿದ್ದಾರೆ. 

ಚಂದ್ರಯಾನ 2 ವಿಫಲವಾದಾಗ ಇಡೀ ಭಾರತವೇ ಶೋಕಿಸಿತ್ತು. ಆದರೆ ಕಾಶ್ಮೀರದ ಈ ದುಃಸ್ಥಿತಿಗೆ ಮರುಗುವವರೇ ಇಲ್ಲ. ಕಾಶ್ಮೀರಿಗರು ಆಘಾತ ಮತ್ತು ದ್ರೋಹದ ಆಳವಾದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಇಲ್ತಿಜಾ ಹರಿಹಾಯ್ದಿದ್ದಾರೆ.

ಇದೇ ವೇಳೆ ಕಾಶ್ಮೀರದ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ಇಲ್ತಿಜಾ ಮುಳ್ತಿ ಪತ್ರ ಬರೆದಿದ್ದಾರೆ.