ಶ್ರೀನಗರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಹಿಂಪಡೆದ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ್ದವು. ಆದರೆ, ಅವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆ ಹಿಡಿದು, ಮರಳಿ ಕಳುಹಿಸಲಾಗಿತ್ತು. ಇದಕ್ಕೆ ಬಿಎಸ್ಪಿ ಮುಖಂಡೆ ಮಾಯಾವತಿ ರೆಸ್ಪಾಂಡ್ ಮಾಡಿದ್ದು ಹೀಗೆ....
ನವದೆಹಲಿ (ಆ.26): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ಪ್ರತಿಪಪಕ್ಷಗಳ ಮುಖಂಡರು ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ್ದನ್ನು ಬಿಎಸ್‌ಪಿ ವರಿಷ್ಠೆ ಮಾಯಾವತಿ ವಿರೋಧಿಸಿದ್ದಾರೆ. ಆ ಮೂಲಕ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುದ್ದಕ್ಕೆ ಕೇಂದ್ರ ಸರಕಾರವನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಕಣಿವೆಗೆ ಭೇಟಿ ನೀಡಲು ಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಿಂದಲೇ ದೆಹಲಿಗೆ ವಾಪಸ್ ಕಳುಹಿಸಲಾಗಿತ್ತು. ಈ ಪ್ರವಾಸ ಕೈಗೊಳ್ಳುವ ಮೊದಲು ಪ್ರತಿಪಕ್ಷಗಳು ಯೋಚಿಸಬೇಕಿತ್ತು, ಎಂದು ಮಾಯಾವತಿ ರಾಹುಲ್ ಟೀಂ ಅನ್ನು ತಿವಿದಿದ್ದಾರೆ.
ಕಾಂಗ್ರೆಸ್ ಮತ್ತು ಇತರೆ ಪಕ್ಷದ ನಾಯಕರು ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಅನುಮತಿಯಿಲ್ಲದೆ ಕಾಶ್ಮೀರಕ್ಕೆ ಭೇಟಿ ನೀಡಲು ಯತ್ನಿಸಿದ್ದರು. ಅವರನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಈ ಬಗ್ಗೆ ಮಾಯಾವತಿ ಸರಣಿ ಟ್ವೀಟ್ ಮಾಡಿದ್ದಾರೆ.
ಭೀಮರಾವ್ ಅಂಬೇಡ್ಕರ್ ಅವರು ಭಾರತದ ಸಮಾನತೆ, ಐಕ್ಯತೆ ಮತ್ತು ಸಮಗ್ರತೆಯ ಬೆಂಬಲಿಗರಾಗಿದ್ದರು. ಆ ಕಾರಣದಿಂದಲೇ ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದು ಒಳ್ಳೆಯದಾಗಿದೆ, ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದರು.
ಸುಮಾರು ಏಳು ದಶಕಗಳ ಕಾಲವಿದ್ದ ಕಾನೂನನ್ನು ಹಿಂಪಡೆದಾಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ತುಸು ಕಾಲ ತೆಗೆದುಕೊಳ್ಳುತ್ತದೆ. ಅದಕ್ಕೆ ಸಹನೆ ಅಗತ್ಯ, ಎಂದು ರಾಹುಲ್ ಟೀಂಗೆ ಮಾಯಾ ಕಿವಿಮಾತು ಹೇಳಿದ್ದಾರೆ.
