ನವದೆಹಲಿ (ಆ. 25): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿ 11 ವಿಪಕ್ಷ ನಾಯಕರ ಕಾಶ್ಮೀರ ಭೇಟಿಗೆ ಅವಕಾಶ ನಿರಾಕರಿಸಲಾಗಿದ್ದು, ಶ್ರೀನಗರ ವಿಮಾನ ನಿಲ್ದಾಣದಿಂದ ಅವರನ್ನು ವಾಪಸ್‌ ದೆಹಲಿಗೆ ಕಳುಹಿಸಲಾಗಿದೆ.

370 ನೇ ವಿಧಿ ರದ್ದಾದ ಬಳಿಕ ಅಲ್ಲಿನ ಸನ್ನಿವೇಶ ಅವಲೋಕನಕ್ಕೆ ಕಾಂಗ್ರೆಸ್‌, ಸಿಪಿಐ, ಸಿಪಿಎಂ, ಆರ್‌ಜೆಡಿ, ಎನ್‌ಸಿಪಿ, ಟಿಎಂಸಿ ಹಾಗೂ ಡಿಎಂಕೆ ಸೇರಿ ವಿರೋದ ಪಕ್ಷದ ನಿಯೋಗ ಶುಕ್ರವಾರ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿತ್ತು.

ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿಯ ಭೀತಿ ಇರುವುದರಿಂದ ಸರ್ಕಾರ ಜನರ ರಕ್ಷಣೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ರಾಜಕೀಯ ನಾಯಕರ ಭೇಟಿಯಿಂದ ಅಲ್ಲಿನ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಿ ನಾಯಕರ ಪ್ರವೇಶ ನಿರಾಕರಿಸಲಾಗಿದೆ.

ನಾವು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿದ್ದು, ನಾವು ಯಾವುದೇ ಕಾನೂನು ಉಲ್ಲಂಘಿಸುತ್ತಿಲ್ಲ. ಕಳೆದ 20 ದಿನಗಳಿಂದ ಜಮ್ಮು- ಕಾಶ್ಮೀರದ ಪರಿಸ್ಥಿತಿ ಬಹಳ ಆತಂಕಕಾರಿಯಾಗಿದೆ. 20 ದಿನಗಳಿಂದ ಯಾವುದೇ ಮಾಹಿತಿಯಿಲ್ಲ. ಸರ್ಕಾರ ಅಲ್ಲಿನ ಸ್ಥಿತಿ ಸಹಜವಾಗಿದೆ ಎಂದು ಹೇಳುತ್ತಿದೆ. ಒಂದು ವೇಳೆ ಪರಿಸ್ಥಿತಿ ಸರಿಯಾಗಿದ್ದರೆ ಅಲ್ಲಿಗೆ ಹೋಗಲು ಸರ್ಕಾರ ನಮಗ್ಯಾಕೆ ಅನುಮತಿ ನೀಡುತ್ತಿಲ್ಲ ಎಂದು ನಿಯೋಗದ ಅದಸ್ಯ ಹಾಗೂ ರಾಜ್ಯಸಭಾ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಪ್ರಶ್ನೆ ಮಾಡಿದ್ದಾರೆ.

ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ರದ್ದು ಮಾಡಿದ ಬಳಿಕ ಜಮ್ಮು ಕಾಶ್ಮೀರಕ್ಕೆ ಎರಡೆರಡು ಬಾರಿ ಹೋದರೂ, ಗುಲಾಂ ನಬಿ ಅಜಾದ್‌ರನ್ನು ಶ್ರೀನಗರ ಏರ್‌ಪೋರ್ಟ್‌ನಿಂದಲೇ ಬಲವಂತವಾಗಿ ದೆಹಲಿಗೆ ಕಳುಹಿಸಲಾಗಿತ್ತು.

ಈ ಮಧ್ಯೆ ಜಮ್ಮು ಕಾಶ್ಮೀರದಲ್ಲಿ ಬಲವಂತವಾಗಿ ಜನರ ಸದ್ದಡಗಿಸಲಾಗುತ್ತಿದೆ ಎನ್ನುವ ರಾಹುಲ್‌ ಗಾಂಧಿ ಮಾತಿನಿಂದಾಗಿ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹಾಗೂ ರಾಹುಲ್‌ ಗಾಂಧಿ ಮಧ್ಯೆ ಮಾತಿನ ಯುದ್ಧ ನಡೆದಿತ್ತು. ನಿಯೋಗದಲ್ಲಿ ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ. ರಾಜ, ಡಿಎಂಕೆಯ ತಿರುಚಿ ಶಿವ, ಆರ್‌ಜೆಡಿಯ ಮನೋಜ್‌ ಝಾ, ಟಿಎಂಸಿಯ ದಿನೇಶ್‌ ತ್ರಿವೇದಿ ಇದ್ದರು.