ಜಲಾಶಯದಲ್ಲಿ ಉದಯ್ ಮತ್ತು ಅನಿಲ್ ಜೀವ ಕಳೆದುಕೊಂಡು 15 ದಿನಗಳು ಕಳೆದಿದ್ದು, ಇಬ್ಬರು ಆಪ್ತ ಸ್ನೇಹಿತರಾಗಿದ್ದ ಕಾರಣ ಉದಯ್ ರವರ ಕುಟುಂಬಸ್ಥರು ಶ್ರಾದ್ಧ ಕಾರ್ಯ ಮಾಡಿದರು.

ರಾಮನಗರ /ಮಾಗಡಿ(ನ.22): ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಪ್ರಾಣತೆತ್ತ ಸಹ ನಟರಾದ ಉದಯ್ ಮತ್ತು ಅನಿಲ್ ಶ್ರಾದ್ಧ ಕಾರ್ಯವನ್ನು ಅವರ ಕುಟುಂಬಸ್ಥರು ಜಲಾಶಯದ ದಡದಲ್ಲಿ ಸೋಮವಾರ ನೆರವೇರಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಲಾಶಯದಲ್ಲಿ ಉದಯ್ ಮತ್ತು ಅನಿಲ್ ಜೀವ ಕಳೆದುಕೊಂಡು 15 ದಿನಗಳು ಕಳೆದಿದ್ದು, ಇಬ್ಬರು ಆಪ್ತ ಸ್ನೇಹಿತರಾಗಿದ್ದ ಕಾರಣ ಉದಯ್ ರವರ ಕುಟುಂಬಸ್ಥರು ಶ್ರಾದ್ಧ ಕಾರ್ಯ ಮಾಡಿದರು.

ನಟ ಉದಯ್ ರವರ ಪುಣ್ಯಾರಾಧನೆಯನ್ನು ಬೆಂಗಳೂರಿನಲ್ಲಿಯೇ ನೆರವೇರಿಸಲಾಗಿತ್ತು. ಉದಯ್ ಎಲ್ಲಿ ಜೀವ ಬಿಟ್ಟರೊ ಆ ಸ್ಥಳದಲ್ಲಿ ತಿಥಿ ಕಾರ್ಯ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಪುರೋಹಿತರು ಹೇಳಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಜಲಾಶಯದ ದಡದಲ್ಲಿ ತಿಥಿ ಕಾರ್ಯ ಮಾಡಿ ಪಿಂಡ ಪ್ರಧಾನ ಮಾಡಿದರು.

ಉದಯ್ ಗೆ ಇಷ್ಟವಿದ್ದ ತಿಂಡಿಗಳಾದ ಚಿಕನ್, ಹೋಳಿಗೆ, ಮೊಸರನ್ನ, ಚಿತ್ರಾನ್ನ, ವಡೆ, ಕೋಡುಬಳೆ, ಚಕ್ಕುಲಿ, ವೈನ್, ಸಿಗರೇಟ್ ಸೇರಿದಂತೆ ಇತ್ಯಾದಿಗಳನ್ನು ನೇವೈದ್ಯ ಮಾಡಲಾಯಿತು. ಪಕ್ಕದ ಜಾಗದಲ್ಲಿಯೇ ಅನಿಲ್ ನ ತಿಥಿ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದರು.

ಈ ವೇಳೆ ಮಾತನಾಡಿದ ಉದಯ್ ಭಾವ ಮುನಿರಾಜು, ಸರ್ಕಾರದಿಂದ ಪರಿಹಾರ ಮಾತ್ರ ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಹಣ ತಲುಪಿಲ್ಲ. ಎಲ್ಲರು ಬಂದು ಸಾಂತ್ವನ ಹೇಳಿದ್ದಾರೆಯೇ ಹೊರೆತು ಕುಟುಂಬಕ್ಕೆ ಯಾವುದೇ ಸಹಾಯ ಮಾಡಿಲ್ಲ ಎಂದರು.

ದುಡಿಯುತ್ತಿರುವ ಮಗನನ್ನು ಕಳೆದುಕೊಂಡಿರುವ ಕುಟುಂಬ ತೀವ್ರ ಸಂಕಷ್ಟದಲ್ಲಿದೆ. ಮಾಸ್ತಿಗುಡಿ ಚಿತ್ರತಂಡದವರನ್ನು ಈಗಾಗಲೇ ಪೊಲೀಸರು ಬಂಸಿದ್ದಾರೆ. ಅವರಿಗೆ ಶಿಕ್ಷೆ ಆಗುತ್ತದೆಯೊ ಇಲ್ಲವೊ ಎಂಬುದನ್ನು ದೇವರು ನೋಡಿಕೊಳ್ಳಲಿ. ನಟ ದುನಿಯಾ ವಿಜಿ ಒಂದು ಸಲ ಬಂದು ಹೋದ ಮೇಲೆ ಮತ್ತೆ ಮನೆಗೆ ಬಂದಿಲ್ಲ . ಈಗ ನಮ್ಮ ಸ್ಥಿತಿ ತುಂಬಾ ಶೋಚನೀಯವಾಗಿದೆ ಎಂದು ದುಃಖಿತರಾದರು.

ಒಬ್ಬ ಉತ್ತಮ ಖಳ ನಟನನ್ನು ಚಿತ್ರದ ಬೇಜವಾಬ್ದಾರಿಯಿಂದ ಕಳೆದುಕೊಳ್ಳುವಂತಾಗಿದೆ. ಡೆಂಜರ್ ಝೋನ್ ಚಿತ್ರದಲ್ಲಿ ಖಳ ನಟನಾಗಿ ಉದಯ್ ನಟಿಸಿದ್ದು , ಆ ಚಿತ್ರದ ತಂಡ 50 ಸಾವಿರ ಪರಿಹಾರವನ್ನು ನೀಡಿದ್ದಾರೆ. ಮತ್ತೆ ಯಾರು ಪರಿಹಾರ ನೀಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಉದಯ್ ಸಹೋದರಿಯರಾದ ಸುಧಾ, ಆಶಾ, ಸಹೋದರ ಸನತ್ ಹಾಗೂ ಸ್ನೇಹಿತರು ಹಾಜರಿದ್ದರು.