ಹೈದರಾಬಾದ್(ಆ.28): ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ರೂಪಿಸಿದ ಆರೋಪದ ಮೇಲೆ, ಆಂಧ್ರದ ಮಾವೋವಾದಿ ಚಿಂತಕ, ಕವಿ ವರವರ ರಾವ್ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಇಂದು ಹೈದರಾಬಾದ್ ನ ವರವರ ರಾವ್ ಮೆನೆಗೆ ಏಕಾಏಕಿ ದಾಳಿ ನಡೆಸಿದ ಪುಣೆ ಪೊಲೀಸರು, ರಾವ್ ಅವರನ್ನು ಬಂಧಿಸಿದ್ದಲ್ಲದೇ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಭೀಮಾ ಕೋರೆಗಾಂವ್ ಹಿಂಸೆಯ ಬಳಿಕ ನಕ್ಸಲೀಯ ಸಂಘಟನೆಗಳು ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸುತ್ತಿವೆ ಎಂಬ ಆಘಾತಕಾರಿ ಅಂಶ ಬಯಲಾಗಿತ್ತು. ಮೋದಿ ಹತ್ಯೆ ಸಂಬಂಧ ಬರೆದ ಪತ್ರದಲ್ಲಿ ಹಲವು ಉನ್ನತ ನಾಯಕರ ಹೆಸರು ಉಲ್ಲೇಖಿಸಲಾಗಿತ್ತು.

ಅದರಂತೆ ವರವರ ರಾವ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ವರವರ ರಾವ್ ಜೊತೆ ಉಸ್ಮಾನಿಯಾ ವಿವಿ ಪ್ರೋಫೆಸರ್ ಒಬ್ಬರನ್ನು ಕೂಡ ಬಂಧಿಸಲಾಗಿದೆ ಎಂಬ ಮಾಹಿತಿ ಇದೆ. ಇವರಿಷ್ಟೇ ಅಲ್ಲದೇ ದೇಶದ ವಿವಿಧೆಡೆಯೂ ಇದೇ ರೀತಿಯ ದಾಳಿಗಳು ನಡೆದಿದ್ದು, ಮುಂಬೈನ ವೆರ್ನಾನ್ ಗೊನ್ಜಾಲ್ವ್ಸ್, ಅರುಣ್ ಫೆರೀರಾ, ಛತ್ತೀಸ್ ಗಢದಲ್ಲಿ  ಟ್ರೇಡ್ ಯೂನಿಯನ್  ಹೋರಾಟಗಾರ್ತಿ ಸುಧಾ ಭಾರಾದ್ವಾಜ್, ದೆಹಲಿಯಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.

ಇನ್ನು ವರವರ ರಾವ್ ವಿರುದ್ಧದ ಆರೋಪವನ್ನು ನಿರಾಕರಿಸಿರುವ ವೀರಾಸಂ ಸಂಘಟನೆ, ಸರ್ಕಾರ ಪ್ರಜಾತಾಂತ್ರಿಕ ಶಕ್ತಿಗಳ ಧ್ವನಿ ಅಡಗಿಸಲು ಹೆಣೆದ ಕತೆ ಇದು ಎಂದು ಆರೋಪಿಸಿದೆ.