ಬೆಂಗಳೂರು :  ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ನೌಕರರು ಆಯ್ಕೆಯಾದ ಹುದ್ದೆಗೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ! ಯಾವುದೇ ನೌಕರ ಒಂದೇ ಶಾಖೆಯಲ್ಲಿ ಮೂರು ವರ್ಷ ಮಾತ್ರ ಕಾರ್ಯ ನಿರ್ವಹಿಸಬೇಕು ಎಂದು ನಿಗಮದ ನಿಯಮವೇ ಹೇಳುತ್ತದೆ. ಆದರೆ, ಈ ನೌಕರರಿಗೆ ಆ ನಿಯಮ ಅನ್ವಯವಾಗುವುದಿಲ್ಲ!

ಏಕೆಂದರೆ, ನಿಗಮದ 15ಕ್ಕೂ ಹೆಚ್ಚು ನೌಕರರು ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಒಂದೇ ಶಾಖೆಯಲ್ಲಿ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಕೆಲಸ ಮಾಡುವಂತಿಲ್ಲ ಎಂಬ ಸ್ಪಷ್ಟನಿಯಮ ಇದ್ದರೂ ನಿಗಮದ ಹಿರಿಯ ಅಧಿಕಾರಿಗಳು ಆ ನೌಕರರನ್ನು ಬೇರೆಡೆಗೆ ವರ್ಗಾಯಿಸುವ ಗೋಜಿಗೆ ಹೋಗಿಲ್ಲ. ನೌಕರರು ಮತ್ತು ಹಿರಿಯ ಅಧಿಕಾರಿಗಳ ಈ ಹೊಂದಾಣಿಕೆ ಹಲವು ಅನುಮಾನ ಹುಟ್ಟಿಸುತ್ತದೆ ಎಂದು ನಿಗಮದ ನೌಕರರೇ ಹೇಳುತ್ತಾರೆ.

ಸಹಾಯಕ ಸಂಚಾರ ನಿರೀಕ್ಷಕ (ಎಟಿಐ), ಸಹಾಯಕ ಸಂಚಾರ ಅಧೀಕ್ಷಕ (ಎಟಿಎಸ್‌), ಸಂಚಾರ ನಿರೀಕ್ಷಕ (ಟಿಐ) ಹುದ್ದೆಗಳಿಗೆ ನೇಮಕಗೊಂಡವರು ಬಸ್‌ ಡಿಪೋ, ಬಸ್‌ ನಿಲ್ದಾಣ, ಮಾರ್ಗ ತಪಾಸಣೆ ಮೊದಲಾದ ಕಾರ್ಯ ಮಾಡಬೇಕು. ಆದರೆ, ಎಟಿಐ, ಎಟಿಎಸ್‌, ಟಿಐ ಹುದ್ದೆಗೆ ನೇಮಕವಾಗಿರುವ 15ಕ್ಕೂ ಹೆಚ್ಚು ಮಂದಿ ಕೇಂದ್ರ ಕಚೇರಿಯ ವಿವಿಧ ಶಾಖೆಗಳಲ್ಲಿ ಕಿರಿಯ ಸಹಾಯಕರು ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ನೌಕರರ ಹುದ್ದೆಗೂ ಮಾಡುತ್ತಿರುವ ಕೆಲಸಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಎಂಟು, ಹತ್ತು ವರ್ಷ, ಹದಿಮೂರು ವರ್ಷ ಹೀಗೆ ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ನಿಯಮ ಗಾಳಿಗೆ ತೂರಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬಡ್ತಿಗೆ ಆಸಕ್ತಿ ತೋರಲ್ಲ!:

ಎಟಿಎಸ್‌, ಎಟಿಐ ಹಾಗೂ ಟಿಐಗಳಾಗಿ ಡಿಪೋ, ಬಸ್‌ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಬಡ್ತಿ ಪಡೆಯುವುದು ಅಷ್ಟುಸುಲಭವಲ್ಲ. ಕಾರ್ಯ ನಿರ್ವಹಣೆ ವೇಳೆ ಸಣ್ಣ ಲೋಪವಾದರೂ ಹಿರಿಯ ಅಧಿಕಾರಿಗಳು ಮೆಮೋ ನೀಡಿ ಕಾರಣ ಕೇಳುತ್ತಾರೆ. ಕೆಲವು ಬಾರಿ ಅಮಾನತು ಶಿಕ್ಷೆ ನೀಡಲಾಗುತ್ತದೆ. ಕೆಲ ಬಾರಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ. ಮುಂಬಡ್ತಿ ನೀಡುವಾಗ ಸೇವಾ ದಾಖಲೆಯ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಎಷ್ಟೋ ನೌಕರರು ಕ್ಷುಲ್ಲಕ ಕಾರಣಗಳಿಂದ ಮುಂಬಡ್ತಿ ತಪ್ಪಿಸಿಕೊಂಡಿರುವ ನಿದರ್ಶನಗಳಿವೆ. ಎಟಿಎಸ್‌, ಎಟಿಐ ಹಾಗೂ ಟಿಐ ಹುದ್ದೆಗೆ ನೇಮಕಗೊಂಡು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವ ನೌಕರರಿಗೆ ಮೆಮೋ, ಅಮಾನತ್ತಿನ ಭಯವಿರುವುದಿಲ್ಲ. ಏಕೆಂದರೆ, ಅವರಿಗೆ ಮೇಲಾಧಿಕಾರಿಗಳ ಕೃಪಾಕಟಾಕ್ಷ ಇರುತ್ತದೆ. ಈ ಹಿಂದೆ ಹಲವು ಮಂದಿ ಕೇಂದ್ರ ಕಚೇರಿಯಲ್ಲಿ ಇದ್ದುಕೊಂಡು ನಿರಾಯಾಸವಾಗಿ ಮುಂಬಡ್ತಿ ಪಡೆದು ನಿವೃತ್ತರಾದ ಉದಾಹರಣೆಗಳಿವೆ ಎಂದು ಸಹಾಯಕ ಸಂಚಾರ ನಿರೀಕ್ಷಕರೊಬ್ಬರು ಹೇಳಿದರು.

ಸಮವಸ್ತ್ರ ಮಾರಾಟ!

ಎಟಿಎಸ್‌, ಎಟಿಐ ಹಾಗೂ ಟಿಐಗಳಿಗೆ ಪ್ರತಿ ವರ್ಷ ನಿಗಮದಿಂದ ಉಚಿತವಾಗಿ ಸಮವಸ್ತ್ರ ಹಾಗೂ ಹೊಲಿಗೆ ಭತ್ಯೆ ನೀಡಲಾಗುತ್ತದೆ. ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಈ ನೌಕರರು ಸಮವಸ್ತ್ರ ಹಾಗೂ ಭತ್ಯೆ ಪಡೆಯುತ್ತಾರೆ. ಆದರೆ, ಒಮ್ಮೆಯೂ ಅದನ್ನು ಧರಿಸುವುದಿಲ್ಲ. ಮೇಲಾಧಿಕಾರಿಗಳು ಅದನ್ನು ಪ್ರಶ್ನಿಸುವುದಿಲ್ಲ. ಉಚಿತವಾಗಿ ಪಡೆದ ಸಮವಸ್ತ್ರಗಳನ್ನು ನಿರ್ವಾಹಕರು, ಚಾಲಕರು ಹಾಗೂ ಖಾಸಗಿ ಶಾಲಾ ವಾಹನ ಚಾಲಕರಿಗೆ .200-300ಗೆ ಮಾರಾಟ ಮಾಡಿ ಹಣ ಪಡೆಯುತ್ತಾರೆ. ಮೇಲಾಧಿಕಾರಿಗಳ ಸಹಕಾರದೊಂದಿಗೆ ನಿಗಮದ ಎಲ್ಲ ಸವಲತ್ತುಗಳನ್ನು ಪಡೆದು ನಿರಾತಂಕವಾಗಿ ದಿನದೂಡುತ್ತಿದ್ದಾರೆ ಎನ್ನುತ್ತಾರೆ ಸಂಚಾರ ನಿರೀಕ್ಷಕರೊಬ್ಬರು.

ವರದಿ :  ಮೋಹನ ಹಂಡ್ರಂಗಿ