ಬೆಂಗಳೂರು [ಆ.23]:  ಸಂಪುಟ ವಿಸ್ತರಣೆ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡು ಬಂದರೂ ಬೂದಿ ಮುಚ್ಚಿದ ಕೆಂಡದಂತಿದೆ.

ತಮ್ಮ ಪಕ್ಷದ ಸರ್ಕಾರ ಬಂದಿದೆಯಲ್ಲ ಎಂಬ ಸಮಾಧಾನದಿಂದ ಹಲವು ಆಕಾಂಕ್ಷಿ ಶಾಸಕರು ಬಂಡಾಯದ ಧ್ವನಿ ತಗ್ಗಿಸಿಕೊಂಡು ಮಾತನಾಡುತ್ತಿದ್ದರೂ ಹಿರಿಯ ಶಾಸಕ ಉಮೇಶ್‌ ಕತ್ತಿ ಅವರು ಸದ್ದಿಲ್ಲದೆ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ. ಅವರೊಂದಿಗೆ ಪಕ್ಷದ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಏಕಾಏಕಿ ಈಗ ಬಹಿರಂಗವಾಗಿ ಯಾವುದೇ ಭಿನ್ನಮತದ ಚಟುವಟಿಕೆಗಳನ್ನು ನಡೆಸದಿದ್ದರೂ ಮುಂದಿನ ಸಂಪುಟ ವಿಸ್ತರಣೆ ಗುರಿಯಾಗಿಸಿಕೊಂಡು ತೆರೆಮರೆಯಲ್ಲಿ ಭಿನ್ನಮತ ಚಟುವಟಿಕೆಗಳು ಮುಂದುವರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳಿಗಳ ನೇಮಕ ಪ್ರಕ್ರಿಯೆಯನ್ನು ಆದಷ್ಟುಶೀಘ್ರ ಕೈಗೆತ್ತಿಕೊಂಡು ಕೆಲವು ಆಕಾಂಕ್ಷಿ ಶಾಸಕರಿಗೆ ಅಧ್ಯಕ್ಷಗಿರಿ ಕೊಟ್ಟರೆ ಬಂಡಾಯದ ಬಿಸಿ ಇನ್ನಷ್ಟುಶಮನಗೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾಕತೊಡಗಿದ್ದಾರೆ. ಈ ಬಗ್ಗೆಯೂ ಶುಕ್ರವಾರ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ ವೇಳೆ ಪ್ರಸ್ತಾಪ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಪುಟದಲ್ಲಿ ಇನ್ನೂ 16 ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಇವುಗಳು ಅನರ್ಹ ಶಾಸಕರಿಗಾಗಿ ಕಾದಿರಿಸಲಾಗಿದೆ. ಆದರೆ, ಅದಕ್ಕಿನ್ನೂ ಸಮಯವಿದೆ. ಮೇಲಾಗಿ ಅನರ್ಹ ಶಾಸಕರಿಗೆ ಎಷ್ಟುಸಚಿವ ಸ್ಥಾನಗಳನ್ನು ನೀಡಲಾಗುತ್ತದೆ ಎಂಬುದು ಇನ್ನೂ ನಿಗೂಢವಾಗಿದೆ. ಹೀಗಾಗಿ, ಎರಡನೇ ಹಂತದ ಸಂಪುಟ ವಿಸ್ತರಣೆ ವೇಳೆ ಅಥವಾ ನಂತರ ಮತ್ತೊಂದಿಷ್ಟುಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.