ಸರ್ಜಿಕಲ್ ಕಾರ್ಯಾಚರಣೆಯು ಪೂರ್ವನಿರ್ಧಾರಿತವಾಗಿರುತ್ತದೆ. ಸೇನೆಯ ಹಿರಿಯರಿಗೆ ಹಾಗೂ ಸರಕಾರಕ್ಕೆ ಮುಂಚಿತವಾಗಿ ತಿಳಿಸಿ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಆದರೆ, ಕೊವೆಟ್(Covet) ಆಪರೇಷನ್ ಒಂದು ರೀತಿಯಲ್ಲಿ ಅಜ್ಞಾತ ಕಾರ್ಯಾಚರಣೆಯಾಗಿರುತ್ತದೆ.

ನವದೆಹಲಿ(ಅ. 12): ಯುಪಿಎ ಸರಕಾರದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಅಥವಾ ನಿರ್ದಿಷ್ಟ ಗುರಿಯ ಸೇನಾ ಕಾರ್ಯಾಚರಣೆ ನಡೆದಿತ್ತೆಂದು ಹೇಳಿಕೊಂಡಿರುವ ಕಾಂಗ್ರೆಸ್ ಪಕ್ಷದ ವಾದವನ್ನು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಳ್ಳಿಹಾಕಿದ್ದಾರೆ. ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು, ತಮಗೆ ತಿಳಿದಂತೆ ಇಂತಹ ಸರ್ಜಿಕಲ್ ಆಪರೇಷನ್ ಹಿಂದೆ ನಡೆದದ್ದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2011ರಲ್ಲಿ ಭಾರತೀಯ ಸೇನೆಯು ಪಾಕ್ ಗಡಿಯೊಳಗೆ ನುಗ್ಗಿ ಮೂವರು ಶತ್ರುಗಳ ತಲೆ ಕತ್ತರಿಸಿ ಎತ್ತಿಕೊಂಡು ಬಂದ ಕಾರ್ಯಾಚರಣೆ ಬಗ್ಗೆ ದ ಹಿಂದೂ ಪತ್ರಿಕೆ ಮೊನ್ನೆಯಷ್ಟೇ ವರದಿ ಪ್ರಸಾರ ಮಾಡಿತ್ತು. ಅದಕ್ಕೆ ಸೇನಾ ದಾಖಲೆಗಳು ತನ್ನಲ್ಲಿವೆ ಎಂದು ಆ ಪತ್ರಿಕೆ ಹೇಳಿಕೊಂಡಿತ್ತು. ಹಾಗಾದರೆ, ಆ ವರದಿ ಸುಳ್ಳೇ? ಮನೋಹರ್ ಪರ್ರಿಕರ್ ಹೇಳುವ ಪ್ರಕಾರ, 2011ರಲ್ಲಿ ನಡೆದದ್ದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ಬದಲಾಗಿ ಅದೊಂದು ಕೊವೆಟ್ ಆಪರೇಷನ್, ಅಥವಾ ಅಜ್ಞಾತ ಕಾರ್ಯಾಚರಣೆ.

ಸರ್ಜಿಕಲ್'ಗೂ ಕೊವೆಟ್'ಗೂ ಏನು ವ್ಯತ್ಯಾಸ?
ಸರ್ಜಿಕಲ್ ಕಾರ್ಯಾಚರಣೆಯು ಪೂರ್ವನಿರ್ಧಾರಿತವಾಗಿರುತ್ತದೆ. ಸೇನೆಯ ಹಿರಿಯರಿಗೆ ಹಾಗೂ ಸರಕಾರಕ್ಕೆ ಮುಂಚಿತವಾಗಿ ತಿಳಿಸಿ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಆದರೆ, ಕೊವೆಟ್(Covet) ಆಪರೇಷನ್ ಒಂದು ರೀತಿಯಲ್ಲಿ ಅಜ್ಞಾತ ಕಾರ್ಯಾಚರಣೆಯಾಗಿರುತ್ತದೆ. ಗಡಿಭಾಗದಲ್ಲಿ ಸೈನಿಕರು ತಾವೇ ಸ್ಕೆಚ್ ಹಾಕಿ ಕಾರ್ಯಾಚರಣೆ ನಡೆಸುತ್ತಾರೆ. ಎಲ್ಲವೂ ಮುಗಿದ ಬಳಿಕ ಅದರ ವರದಿಯನ್ನಷ್ಟೇ ನೀಡುತ್ತಾರೆ. ಪ್ರಧಾನಿಗೆ ಇದನ್ನು ಮುಂಚಿತವಾಗಿ ತಿಳಿಸಬೇಕೆಂದಿಲ್ಲ. ವಿಶ್ವದಾದ್ಯಂತ ಸೇನೆಗಳಲ್ಲಿ ಇಂತಹ ಕೊವೆಟ್ ಆಪರೇಷನ್ ಇದ್ದೇ ಇರುತ್ತದೆ.