* ನ್ಯಾಯಾಧಿಕರಣವೇ ಪ್ರಕರಣ ಇತ್ಯರ್ಥ ಮಾಡಲಿ: ಪರ್ರಿಕರ್* ಮಹದಾಯಿ ಜಲ ವಿವಾದವನ್ನು ಮೂರು ರಾಜ್ಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ ಎಂದಿತ್ತು ನ್ಯಾಯಾಧೀಕರಣ* ಮಹದಾಯಿ ನದಿ ವ್ಯಾಪ್ತಿಯಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು* ಮಾತುಕತೆಗೆ ಮಹಾರಾಷ್ಟ್ರ ಸಿಎಂ ಒಪ್ಪಿಗೆ; ಆದರೆ, ಗೋವಾ ತಿರಸ್ಕಾರ
ಪೋರ್ವೋರಿಂ (ಗೋವಾ): ‘ಕರ್ನಾಟಕ ಜತೆಗಿನ ಮಹಾದಾಯಿ ನದಿ ನೀರು ಹಂಚಿಕೆ ವಿವಾದ ನ್ಯಾಯಾಲಯದಿಂದ ಹೊರಕ್ಕೆ ಸಾಧ್ಯವಿಲ್ಲ. ವಿವಾದವನ್ನು ಮಹಾದಾಯಿ ನೀರು ವಿವಾದ ನ್ಯಾಯಾಧಿಕರಣವೇ ಇತ್ಯರ್ಥಪಡಿಸುತ್ತದೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹೇಳಿದ್ದಾರೆ. ಈ ಮೂಲಕ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳೋಣ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಆಹ್ವಾನವನ್ನು ಅವರು ನಿರಾಕರಿಸಿದ್ದಾರೆ.
ಶುಕ್ರವಾರ ಗೋವಾದ ಪೋರ್ವೋರಿಂನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರಕರಣ ಕೋರ್ಟ್‌ನಲ್ಲಿದೆ, ನಾನ್ಯಾಕೆ ಮಾತನಾಡಲಿ? ಪ್ರಕರಣ ಪ್ರಸ್ತುತ ನ್ಯಾಯಾಧಿಕರಣದ ಮುಂದಿದೆ, ನ್ಯಾಯಾಧಿಕರಣವೇ ನಿರ್ಧರಿಸಲಿ’ ಎಂದು ಹೇಳಿದರು.
ನ್ಯಾಯಾಲಯದ ಹೊರಗೆ ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಮಹಾದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ಪರಸ್ಪರ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಭೆ ಆಯೋಜಿಸುವಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಗೋವಾ ಸಿಎಂ ಪರ್ರಿಕರ್'ಗೆ ಕಳೆದ ವಾರ ವಿನಂತಿಸಿದ್ದರು. ಸೌಹಾರ್ದ ಪರಿಹಾರ ಕಂಡುಕೊಳ್ಳಲು ಮೂರು ರಾಜ್ಯಗಳ ಸಿಎಂಗಳ ಸಭೆ ನಡೆಸಲು ಅನುಕೂಲಕರ ದಿನಾಂಕ ಸೂಚಿಸುವಂತೆ ಕೋರಿ ಪರ್ರಿಕರ್‌ಗೆ ಸಿದ್ದರಾಮಯ್ಯ ಪತ್ರ ಬರೆದಿದ್ದರು.
ಆದರೆ ಕೋರ್ಟ್'ನಿಂದ ಹೊರಗೆ ಸೌಹಾರ್ಧ ಇತ್ಯರ್ಥದ ಪ್ರಶ್ನೆಯೇ ಇಲ್ಲ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಳ್ಯೇಕರ್ ಹೇಳಿದ್ದರು. ಆದರೆ ಈ ಕುರಿತು ಪರ್ರಿಕರ್ ಅಂತಿಮ ನಿಲುವು ಪ್ರಕಟಿಸಲಿದ್ದಾರೆ ಎಂದು ಹೇಳಿದ್ದರು. ಈಗ ಪರ್ರಿಕರ್ ಅವರೇ ಈ ಹೇಳಿಕೆ ನೀಡಿರುವ ಕಾರಣ ಮಾತುಕತೆಗೆ ಆಶಯಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ.
ನೀರಿನ ವಿವಾದಕ್ಕೆ ಮೂರೂ ರಾಜ್ಯಗಳ ಸಿಎಂಗಳು ಸೌಹಾರ್ದ ಪರಿಹಾರ ಕಂಡುಕೊಳ್ಳುವಂತೆ ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದ ಮಹಾದಾಯಿ ನದಿ ನೀರು ವಿವಾದ ನ್ಯಾಯಾಧಿಕರಣ 2016, ಸೆಪ್ಟಂಬರ್'ನಲ್ಲಿ ಸಲಹೆ ನೀಡಿತ್ತು. ಮಹಾದಾಯಿ ವಿವಾದದ ವಿಚಾರಣೆ ನ್ಯಾಯಾಧಿಕರಣದಿಂದ ನಡೆಯುತ್ತಿದ್ದು, ಅದರ ಅವಧಿ ಆ.21ಕ್ಕೆ ಕೊನೆಗೊಳ್ಳಲಿದೆ. ನ್ಯಾಯಾಧಿಕರಣದ ಅವಧಿ ವಿಸ್ತರಣೆಗೆ ಈಗಾಗಲೇ ಗೋವಾ ಸರ್ಕಾರ ಕೇಂದ್ರಕ್ಕೆ ಪತ್ರವನ್ನೂ ಬರೆದಿದೆ.
ಕನ್ನಡಪ್ರಭ ವಾರ್ತೆ
epaperkannadaprabha.com
