ನವದೆಹಲಿ[ಆ.27]: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ಗೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ)ಯ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದಿದೆ. ಈ ಕುರಿತು ಸೋಮವಾರ ಪ್ರಕಟಣೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ, ಮಾಜಿ ಪ್ರಧಾನಿ ಡಾ. ಸಿಂಗ್‌ ಅವರಿಗೆ ಇನ್ನು ಮುಂದಿನ ದಿನಗಳಲ್ಲಿ ಎಸ್‌ಪಿಜಿ ಭದ್ರತೆ ಇರುವುದಿಲ್ಲ. ಬದಲಾಗಿ ಸಿಆರ್‌ಪಿಎಫ್‌ ಸಿಬ್ಬಂದಿಗಳ ಮೂಲಕ ಝಡ್‌ ಪ್ಲಸ್‌ ಭದ್ರತೆಯಷ್ಟೇ ಇರಲಿದೆ ಎಂದು ಹೇಳಿದೆ.

ರಾಜಕೀಯ ಮುತ್ಸದ್ಧಿ ನಾಯಕರಿಗೆ ಇರುವ ಭಯೋತ್ಪಾದಕರ ಭೀತಿ ಪರಿಗಣಿಸಿ ಕಾಲ-ಕಾಲಕ್ಕೆ ಭದ್ರತಾ ಸಂಸ್ಥೆಗಳು ಭದ್ರತೆಯನ್ನು ಮುಂದುವರಿಸಬೇಕೆ ಎಂಬ ಬಗ್ಗೆ ವೃತ್ತಿಪರತೆಯಿಂದ ಪರಿಶೀಲನೆ ನಡೆಸುತ್ತವೆ. ಇದರ ಆಧಾರದ ಮೇರೆಗೆಯೇ, ಗಣ್ಯ ನಾಯಕರಿಗೆ ಯಾವ ರೀತಿಯ ಭದ್ರತೆ ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಗುತ್ತದೆ. ಈ ಪ್ರಕಾರ 90ರ ದಶಕದಲ್ಲಿ ದೇಶವನ್ನು ಆರ್ಥಿಕ ದಿವಾಳಿಯಿಂದ ಪಾರು ಮಾಡಿದ ಆರ್ಥಿಕ ತಜ್ಞ ಡಾ. ಸಿಂಗ್‌ ಅವರಿಗೆ ಝಡ್‌ ಪ್ಲಸ್‌ ಭದ್ರತೆ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.

ಡಾ. ಸಿಂಗ್ ಪ್ರಮಾಣವಚನ: ರಾಜ್ಯಸಭೆಗೆ ಬೇಕಿದೆ ಇವರ ಆಶೀರ್ವಚನ!

ಈ ನಡುವೆ ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ಟೀಕಿಸಿದೆ. ಈ ಹಿಂದೆ, ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಹುದ್ದೆ ತೊರೆದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ತಮ್ಮ ಮಲಗಿರುವ ಸ್ಥಾನದಿಂದ ಹೊರ ಬರಲಾಗದಿದ್ದರೂ, ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆ ಮುಂದುವರಿಸಲಾಗಿತ್ತು. ಆದರೆ, ಡಾ. ಸಿಂಗ್‌ ಅವರು ರಾಷ್ಟಾ್ರದ್ಯಂತ ಸಂಚರಿಸುತ್ತಿದ್ದಾರೆ. ಅವರಿಗೆ ಭದ್ರತೆಯ ಭೀತಿ ಇದೆ ಎಂದು ಕಾಂಗ್ರೆಸ್‌ ದೂರಿದೆ.

ಏನಿದು ಎಸ್‌ಪಿಜಿ?:

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಅಂಗರಕ್ಷಕರಿಂದಲೇ ಕೊಲೆಗೀಡಾದ ಕಾರಣಕ್ಕಾಗಿ 1985ರಲ್ಲಿ ಗಣ್ಯ ವ್ಯಕ್ತಿಗಳ ಭದ್ರತೆಗಾಗಿ ಎಸ್‌ಪಿಜಿ ವ್ಯವಸ್ಥೆ ಜಾರಿಗೆ ತರಲಾಯಿತು. 1988ರಲ್ಲಿ ದೇಶದ ಪ್ರಧಾನಿಗೆ ಎಸ್‌ಪಿಜಿ ಭದ್ರತೆ ಒದಗಿಸುವ ಕಾನೂನು ರೂಪಿಸಲಾಯಿತು. ಈ ಪ್ರಕಾರ, ರಾಜೀವ್‌ ಗಾಂಧಿ ಅವರು ಪ್ರಧಾನಿ ಸ್ಥಾನದಿಂದ ಇಳಿದ ಕಾರಣಕ್ಕೆ ಅವರ ಎಸ್‌ಪಿಜಿ ಭದ್ರತೆಯನ್ನು ವಿ.ಪಿ ಸಿಂಗ್‌ ಸರ್ಕಾರ ವಾಪಸ್‌ ಪಡೆದಿತ್ತು.

ಏತನ್ಮಧ್ಯೆ, ರಾಜಕೀಯ ಕಾರ್ಯಕ್ರಮ ಹಿನ್ನೆಲೆ ತಮಿಳುನಾಡಿಗೆ ಹೋಗಿದ್ದ ರಾಜೀವ್‌ 1991ರಲ್ಲಿ ಆತ್ಮಹುತಿ ಬಾಂಬ್‌ ದಾಳಿಗೆ ಬಲಿಯಾದರು. ಆ ನಂತರ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬಕ್ಕೆ ಕನಿಷ್ಠ 10 ವರ್ಷಗಳ ಕಾಲ ಎಸ್‌ಪಿಜಿ ಭದ್ರತೆ ನೀಡಲು ಅನುವಾಗುವಂತೆ ಕಾನೂನು ತಿದ್ದುಪಡಿ ಮಾಡಲಾಗಿತ್ತು.

ಸಣ್ಣ ಬ್ರೇಕ್ ಬಳಿಕ ಮತ್ತೆ ಸಂಸತ್ತು ಪ್ರವೇಶಿಸಿದ ಮನಮೋಹನ್ ಸಿಂಗ್!

ಆದರೆ, 2002ರಲ್ಲಿ ಎಸ್‌ಪಿಜಿ ಭದ್ರತೆ ಯಾರಿಗೆಲ್ಲಾ ನೀಡಬೇಕು ಮತ್ತು ಮುಂದುವರಿಸಬೇಕು ಎಂಬುದರ ಬಗ್ಗೆ ಕಾಲ-ಕಾಲಕ್ಕೆ ನಿರ್ಣಯ ಕೈಗೊಳ್ಳುವ ರೀತಿಯಲ್ಲಿ ಕಾನೂನು ರೂಪಿಸಲಾಗಿತ್ತು. ಈ ಪ್ರಕಾರ, ಕನ್ನಡಿಗ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದಿತ್ತು.

ಇಡೀ ದೇಶದಲ್ಲಿ ನಾಲ್ವರಿಗೆ ಮಾತ್ರ ಎಸ್‌ಪಿಜಿ ಭದ್ರತೆ

ನವದೆಹಲಿ: 3000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡ ಎಸ್‌ಪಿಜಿ ಪಡೆಯ ಭದ್ರತೆಯನ್ನು ಇದೀಗ ದೇಶದಲ್ಲಿ ಕೇವಲ ನಾಲ್ಕು ಗಣ್ಯರಿಗೆ ಮಾತ್ರ ಒದಗಿಸಲಾಗಿದೆ. ಅವರೆಂದರೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ.