ನವದೆಹಲಿ[ಮೇ.17]: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ರಾಜ್ಯಸಭಾ ಅವಧಿ ಜೂನ್‌ನಲ್ಲಿ ಕೊನೆಗೊಳ್ಳಲಿದ್ದು, ಮರು ಆಯ್ಕೆಗೆ ಸದ್ಯ ಅವಕಾಶಗಳು ಇಲ್ಲದೇ ಇರುವ ಕಾರಣ ಕೆಲವು ದಿನಗಳ ಮಟ್ಟಿಗೆ ಅವರು ರಾಜ್ಯಸಭೆಯಿಂದ ಹೊರಗೆ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

5 ಬಾರಿ ರಾಜ್ಯಸಭಾ ಸದಸ್ಯರಾಗಿರುವ ಮನಮೋಹನ್‌ ಸಿಂಗ್‌ ಅವರ ರಾಜ್ಯಸಭಾ ಅವಧಿ ಜೂ.14ರಂದು ಕೊನೆಗೊಳ್ಳಲಿದೆ. ಮನಮೋಹನ್‌ ಸಿಂಗ್‌ ಪ್ರತಿನಿಧಿಸುತ್ತಿರುವ ಕ್ಷೇತ್ರವೂ ಸೇರಿ ಅಸ್ಸಾಂನ ಎರಡು ಕ್ಷೇತ್ರಗಳಿಗೆ ಚುನಾವಣಾ ಆಯೋಗ ಜೂ.7ರಂದು ಚುನಾವಣೆ ಘೋಷಿಸಿದೆ. ಆದರೆ, ಮನಮೋಹನ್‌ ಸಿಂಗ್‌ ಅವರನ್ನು ಮರು ಆಯ್ಕೆ ಮಾಡಲು ಬೇಕಾದ ಅಗತ್ಯ ಸಂಖ್ಯಾಬಲ ಕಾಂಗ್ರೆಸ್‌ಗೆ ಇಲ್ಲ. ಸದ್ಯ ರಾಜ್ಯದಲ್ಲಿ ಬಿಜೆಪಿ ಅಧಿಕಾರಲ್ಲಿದ್ದು, ಸಿಂಗ್‌ರಿಂದ ಖಾಲಿಯಾಗಲಿರುವ ಸ್ಥಾನಕ್ಕೆ ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ಮುಖಂಡ ರಾಮ್‌ವಿಲಾಸ್‌ ಪಾಸ್ವಾನ್‌ರನ್ನು ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಒಂದು ವೇಳೆ ಮನಮೋಹನ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಪುನಃ ರಾಜ್ಯಸಭೆಗೆ ಆಯ್ಕೆ ಮಾಡಲೇ ಬೇಕು ಎಂದಾದರೆ, ತನ್ನ ರಾಜ್ಯಸಭಾ ಸದಸ್ಯರ ಪೈಕಿ ಯಾರಾದರೂ ಲೋಕಸಭೆಗೆ ಆಯ್ಕೆ ಆದ ಬಳಿಕ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಮನಮೋಹನ್‌ ಸಿಂಗ್‌ ಅವರಿಗೆ ಟಿಕೆಟ್‌ ನೀಡಬಹುದಾಗಿದೆ. ಅಥವಾ ಜುಲೈನಲ್ಲಿ ತಮಿಳುನಾಡಿನಿಂದ ಆರು ರಾಜ್ಯಸಭಾ ಸ್ಥಾನಗಳು ತೆರವಾಗಲಿದ್ದು, ಕಾಂಗ್ರೆಸ್‌ ಬಯಸಿದರೆ ಅವುಗಳ ಪೈಕಿ ಒಂದು ಸ್ಥಾನವನ್ನು ಡಿಎಂಕೆ ಮನಮೋಹನ್‌ ಸಿಂಗ್‌ ಅವರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಇಲ್ಲವಾದಲ್ಲಿ 2020 ಏಪ್ರಿಲ್‌ ವರೆಗೂ ಮನಮೋಹನ್‌ ಸಿಂಗ್‌ ಅವರು ಕಾಯಲೇಬೇಕು. ಆಗ 55 ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು, ಅವುಗಳಲ್ಲಿ ಕೆಲವು ಸ್ಥಾನಗಳು ಕಾಂಗ್ರೆಸ್‌ಗೆ ಲಭ್ಯವಾಗಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.