ನವದೆಹಲಿ[ಆ.13]: ಸರಿ ಸುಮಾರು 3 ದಶಕಗಳವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮತ್ತೊಮ್ಮೆ ಸಂಸತ್ತಿನ ಮೇಲ್ಮನೆ ಪ್ರವೇಶಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಸ್ಥಾನದಿಂದ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. 

ರಾಜಧಾನಿ ಜಯ್ಪುರ ತಲುಪಿದ ಮನಮೋಹನ್ ಸಿಂಗ್ ರನ್ನು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಹಾಗು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸ್ವಾಗತಿಸಿದ್ದಾರೆ. ಒಟ್ಟು 200 ಸದಸ್ಯ ಬಲ ಹೊಂದಿರುವ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ ನ 100 ಸದಸ್ಯರಿದ್ದಾರೆ. ಇದರ ಹೊರತಾಗಿ 12 ಪಕ್ಷೇತರರು ಹಾಗೂ BSPಯ ಆರು ಸದಸ್ಯರ ಬೆಂಬಲವೂ ಇದೆ. ಹೀಗಾಗಿ ಡಾ. ಸಿಂಗ್ ರಾಜ್ಯಸಭೆಗೆ ಪ್ರವೇಶಿಸುವುದು ಪಕ್ಕಾ ಆಗಿದೆ. 

ಮತ್ತೊಂದೆಡೆ ರಾಜ್ಯದ ವಿಪಕ್ಷ ಬಿಜೆಪಿ ಬಳಿ ಕೇವಲ 73 ಸದಸ್ಯ ಬಲವಿದೆ. ಹೀಗಾಗಿ ಬಿಜೆಪಿ ಈವರೆಗೂ ತಮ್ಮ ಅಭ್ಯರ್ಥಿಯ ಘೋಷಣೆ ಮಾಡಿಲ್ಲ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷರಗಿದ್ದ ಮದನ್ ಲಾಲ್ ಸೈನಿ ನಿಧನದಿಂದ ಈ ಸೀಟು ಖಾಲಿಯಾಗಿತ್ತು. ಹೀಗಾಗಿ ಉಪ ಚುನಾವಣೆ ನಡೆಯಲಿದೆ.

ಈ ಮೊದಲು ಡಾ. ಸಿಂಗ್ ರನ್ನು ಯಾವ ರಾಜ್ಯದಿಂದ ಕಣಕ್ಕಿಳಿಸುವುದು ಎಂದು ನಿರ್ಧರಿಸುವುದು ಕಾಂಗ್ರೆಸ್ ಗೆ ಕಷ್ಟವಾಗಿತ್ತು. ಇನ್ನು ಕಳೆದ 27-28 ವರ್ಷಗಳಲ್ಲಿ ಸಿಂಗ್ ಸಂಸತ್ತಿನಲ್ಲಿರದೇ ಇರುವುದು ಇದೇ ಮೊದಲು. ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ವಿಪಕ್ಷದಲ್ಲಿರುವುದರಿಂದ ಕಾಂಗ್ರೆಸ್ ಗೆ ಬಲ ಸಿಗಲಿದೆ. ಇವರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸುವುದು ಎಂಬ ಗೊಂದಲ ಕಾಂಗ್ರೆಸ್ ವಲಯದಲ್ಲಿದ್ದಾಗ ಇತ್ತ ಡಾ. ಸಿಂಗ್ ನಿವೃತ್ತಿ ಪಡೆಯುತ್ತಾರೆಂಬ ವದಂತಿ ಹಬ್ಬಿತ್ತು.