ಸಿದ್ದರಾಮಯ್ಯ ಆಪ್ತ ಮಂಜೇಗೌಡ ರಾಜೀನಾಮೆ ಅಂಗೀಕಾರ

First Published 11, Apr 2018, 8:51 AM IST
Manje Gowda Resignation
Highlights

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಸಾರಿಗೆ ಇಲಾಖೆಯ ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯ ಸರ್ಕಾರ ಮಂಗಳವಾರ ಅಂಗೀಕರಿಸಿದೆ. ತನ್ಮೂಲಕ ಮಂಜೇಗೌಡ ಅವರು ಕಾಂಗ್ರೆಸ್‌ ಟಿಕೆಟ್‌ನಿಂದ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸುವ ಹಾದಿ ಸುಗಮವಾದಂತಾಗಿದೆ.

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಸಾರಿಗೆ ಇಲಾಖೆಯ ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯ ಸರ್ಕಾರ ಮಂಗಳವಾರ ಅಂಗೀಕರಿಸಿದೆ. ತನ್ಮೂಲಕ ಮಂಜೇಗೌಡ ಅವರು ಕಾಂಗ್ರೆಸ್‌ ಟಿಕೆಟ್‌ನಿಂದ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸುವ ಹಾದಿ ಸುಗಮವಾದಂತಾಗಿದೆ.

ಬಿ.ಪಿ. ಮಂಜೇಗೌಡ ಅವರ ವಿರುದ್ಧ ಅಕ್ರಮ ಆಸ್ತಿಪಾಸ್ತಿ ಕುರಿತ ಲೋಕಾಯುಕ್ತ ದಾಳಿ ಪ್ರಕರಣ ಹಾಗೂ ಬಳ್ಳಾರಿಯ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಲೋಕಾಯುಕ್ತ ಜಂಟಿ ಇಲಾಖಾ ವಿಚಾರಣೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಅಂಗೀಕಾರ ಸರಿಯಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿತ್ತು. ಆದರೆ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯದ ಆಧಾರದ ಮೇಲೆ ಸೋಮವಾರ ಸಾರಿಗೆ ಇಲಾಖೆ ರಾಜೀನಾಮೆ ಅಂಗೀಕರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹೊಳೆನರಸೀಪುರದಲ್ಲಿ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ವಿರುದ್ಧ ಸ್ಪರ್ಧಿಸುವಂತೆ ಮಂಜೇಗೌಡ ಅವರಿಗೆ ಒತ್ತಾಸೆಯಾಗಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಮಂಜೇಗೌಡ ಅವರು ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ವಿರುದ್ಧ ಎರಡು ಕ್ರಿಮಿನಲ್‌ ಪ್ರಕರಣ ವಿಚಾರಣೆಯಲ್ಲಿದ್ದ ಹಿನ್ನೆಲೆಯಲ್ಲಿ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಹೀಗಿದ್ದರೂ ಮಂಜೇಗೌಡ ಅವರು ಮಾತ್ರ ರಾಜೀನಾಮೆ ಅಂಗೀಕಾರ ಆಗುತ್ತದೆ ಎಂಬ ಭರವಸೆಯಿಂದ ಹೊಳೆನರಸೀಪುರದಲ್ಲಿ ಮತದಾರರ ಮನವೊಲಿಸುವ ಕಾರ್ಯ ಆರಂಭಿಸಿದ್ದರು.

ಎಚ್‌.ಕೆ. ರಾಮು ನೂತನ ಅಧ್ಯಕ್ಷ : ಬಿ.ಪಿ. ಮಂಜೇಗೌಡ ಅವರ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಅಧ್ಯಕ್ಷರಾಗಿ ಎಚ್‌.ಕೆ. ರಾಮು ನೇಮಕಗೊಂಡಿದ್ದಾರೆ. ಎಚ್‌.ಕೆ. ರಾಮು ಅವರು ಈವರೆಗೆ ಸಂಘದ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ಔಪಚಾರಿಕವಾಗಿ ಮಂಜೇಗೌಡ ಅವರಿಂದ ರಾಮು ಅವರು ಅಧಿಕಾರ ವಹಿಸಿಕೊಂಡರು.

ಕಾನೂನು ಪ್ರಕಾರ ಅಂಗೀಕಾರ

ನನ್ನ ರಾಜೀನಾಮೆ ಅಂಗೀಕರಿಸದಂತೆ ಅನೇಕರು ಪ್ರಯತ್ನಿಸಿದರು. ಆದರೆ ಅಡ್ವೋಕೇಟ್‌ ಜನರಲ್‌ ಅವರ ಸಲಹೆ ಮೇರೆಗೆ ರಾಜೀನಾಮೆ ಅಂಗೀಕರವಾಗಿದೆ. ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಹೊಳೆನರಸಿಪುರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ.

- ಬಿ.ಪಿ. ಮಂಜೇಗೌಡ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ

loader