ನವದೆಹಲಿ(ಫೆ.13): ತಾವು ಪ್ರತಿನಿಧಿಸುವ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಕ್ರಮ ಗಣಿಗಾರಿಕೆ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಸುಮಲತಾ ಅಂಬರೀಶ್‌ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಶುಕ್ರವಾರದ ಲೋಕಸಭೆ ಕಲಾಪದ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ಸಂಸದೆ ಸುಮಲತಾ ಅವರು, ‘ದೇಶದ ಅಭಿವೃದ್ಧಿಗೆ ಗಣಿಗಳು ಎಷ್ಟು ಮುಖ್ಯವೋ ಅಕ್ರಮ ಗಣಿಗಾರಿಕೆಗಳು, ಕ್ವಾರಿಗಳ ನಿರ್ಬಂಧವೂ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಮಂಡ್ಯದ 15 ಗ್ರಾಮಗಳನ್ನು ಒಳಗೊಂಡ ಸುಮಾರು 2500 ಎಕರೆ ಪ್ರದೇಶಗಳಲ್ಲಿ ಅವ್ಯಾಹತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ?’ ಎಂದು ಪ್ರಶ್ನಿಸಿದರು.

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರಿಗಿದು ಎಚ್ಚರಿಕೆ ಗಂಟೆ: ಸುಮಲತಾ ಅಂಬರೀಶ್

ಇದಕ್ಕೆ ಉತ್ತರಿಸಿದ ಸಚಿವ ಪ್ರಕಾಶ್‌ ಜಾವಡೇಕರ್‌, ‘ಅಕ್ರಮ ಗಣಿಗಾರಿಕೆ ತಡೆಯುವುದು ರಾಜ್ಯದ ಹೊಣೆಯಾಗಿದೆ. ಅಲ್ಲದೆ ಅಕ್ರಮ ಗಣಿಗಾರಿಕೆ ಮೂಲಕ ಪರಿಸರಕ್ಕೆ ಹಾನಿ ಮಾಡುವ ಕಂಪನಿಗಳ ವಿರುದ್ಧ ಭಾರೀ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಇದನ್ನು ಅಪರಾಧ ಪ್ರಕರಣವಾಗಿ ಪರಿಗಣಿಸಲಾಗುತ್ತಿದೆ’ ಎಂದರು.