ದಾವಣಗೆರೆ: ಕುಡುಕ ತಂದೆಯೊಬ್ಬ SSLC  ಓದುತ್ತಿರುವ ಪ್ರತಿಭಾವಂತ ಮಗಳ ಪುಸ್ತಕ ಹಾಗೂ ಬ್ಯಾಗನ್ನು ಸುಟ್ಟುಹಾಕಿದ್ದಾನೆ. 112 ಸಹಾಯವಾಣಿಗೆ ಕರೆ ಬಂದ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ತಂದೆಗೆ ಬುದ್ಧಿವಾದ ಹೇಳಿ, ವಿದ್ಯಾರ್ಥಿನಿಗೆ ಹೊಸ ಪುಸ್ತಕ ಬ್ಯಾಗ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ (ಫೆ.10): ಕುಡಿತದ ಚಟ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿ ಮಾಡುತ್ತದೆ ಎಂಬುದಕ್ಕೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ರ್ಯಾಂಕ್ ಸ್ಟೂಡೆಂಟ್ ಮಗಳ ಓದಿಗೆ ಅಡ್ಡಿಪಡಿಸಿದ ಕುಡುಕ ತಂದೆ, ಆಕೆಯ ಶಾಲಾ ಬ್ಯಾಗ್ ಹಾಗೂ ಪುಸ್ತಕಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕಿದ ಅಮಾನವೀಯ ಕೃತ್ಯ ಎಸಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಓದುವುದೇ ಬೇಡ ಎಂದು ಪುಸ್ತಕ ಬ್ಯಾಗ್ ಸುಟ್ಟ ತಂದೆ!

ಆರುಂಡಿ ಗ್ರಾಮದ ಚಂದ್ರಮ್ಮ ಹಾಗೂ ಚಿಕ್ಕಪ್ಪ ದಂಪತಿಯ ಪುತ್ರಿ ತೇಜಸ್ವಿನಿ, ಕೆಂಚಿಕೊಪ್ಪ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಆದರೆ, ಕುಡಿತದ ಅಮಲಿನಲ್ಲಿ ಮನೆಗೆ ಬಂದ ತಂದೆ ಚಿಕ್ಕಪ್ಪ, 'ನೀನು ಓದುವುದೇ ಬೇಡ' ಎಂದು ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಆಕೆಯ ಶಾಲಾ ಬ್ಯಾಗ್ ಹಾಗೂ ಪಠ್ಯಪುಸ್ತಕಗಳನ್ನು ಕಿತ್ತುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಪರೀಕ್ಷೆ ಹತ್ತಿರವಿರುವ ಸಮಯದಲ್ಲಿ ಪುಸ್ತಕಗಳು ಕಣ್ಣೆದುರೇ ಸುಟ್ಟು ಹೋಗುತ್ತಿರುವುದನ್ನು ಕಂಡು ಬಾಲಕಿ ಕಣ್ಣೀರು ಹಾಕಿದ್ದಾಳೆ.

112ಗೆ ಕರೆ: ಸ್ಥಳಕ್ಕೆ ಧಾವಿಸಿದ ತುರ್ತು ಪೊಲೀಸ್ ಪಡೆ

ಮಗಳ ಜೊತೆ ತಂದೆ ಜಗಳವಾಡಿ ಬ್ಯಾಗ್ ಸುಡುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಭಸ್ಮವಾಗಿದ್ದ ಪುಸ್ತಕಗಳನ್ನು ಕಂಡು ಮಮ್ಮಲ ಮರುಗಿದ್ದಾರೆ. ಮಗಳ ಭವಿಷ್ಯಕ್ಕೆ ಕಂಟಕವಾಗಿದ್ದ ತಂದೆ ಚಿಕ್ಕಪ್ಪನಿಗೆ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡು, ಕಾನೂನು ರೀತಿ ಬುದ್ಧಿವಾದ ಕಲಿಸಿದ್ದಾರೆ.

ಹೊಸ ಬ್ಯಾಗ್, ಪುಸ್ತಕ ನೀಡಿ ಮಾನವೀಯತೆ ಮೆರೆದ ಖಾಕಿ ಪಡೆ

ಪುಸ್ತಕ ಸುಟ್ಟು ಹೋಗಿ ಮುಂದೇನು ಎಂಬ ಚಿಂತೆಯಲ್ಲಿ ಕಣ್ಣೀರು ಹಾಕಿದ್ದ ವಿದ್ಯಾರ್ಥಿನಿ ತೇಜಸ್ವಿನಿಗೆ ಪೊಲೀಸರು ಧೈರ್ಯ ತುಂಬಿದ್ದಾರೆ. ಕೇವಲ ಬುದ್ಧಿವಾದಕ್ಕೆ ಸೀಮಿತವಾಗದ ಪೊಲೀಸರು, ತಾವೇ ಮುಂದೆ ನಿಂತು ಬಾಲಕಿಗೆ ಹೊಸ ಶಾಲಾ ಬ್ಯಾಗ್, ಜಾಮೇಟ್ರಿ ಬಾಕ್ಸ್ ಹಾಗೂ ಅಗತ್ಯವಿರುವ ಪುಸ್ತಕಗಳನ್ನು ಕೊಡಿಸಿದ್ದಾರೆ. 'ಯಾವುದಕ್ಕೂ ಹೆದರಬೇಡ, ಚೆನ್ನಾಗಿ ಓದಿ ಉತ್ತಮ ಫಲಿತಾಂಶ ತೆಗೆದುಕೊ' ಎಂದು ಆಕೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

ಎಸ್ಪಿ ಮೆಚ್ಚುಗೆ: ಪೊಲೀಸರ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಶ್ಲಾಘನೆ

ಸಂಕಷ್ಟದಲ್ಲಿದ್ದ ವಿದ್ಯಾರ್ಥಿನಿಗೆ ತಕ್ಷಣ ಸ್ಪಂದಿಸಿ ಆಕೆಯ ಶಿಕ್ಷಣ ಕುಂಠಿತವಾಗದಂತೆ ನೋಡಿಕೊಂಡ ಪೊಲೀಸರ ಈ ಕಾರ್ಯಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಉಮಾ ಪ್ರಶಾಂತ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ವಲಯದಲ್ಲೂ ಪೊಲೀಸರ ಈ ಮಾನವೀಯ ನಡೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

YouTube video player