ಜನರ ಜೀವ ಉಳಿಸಿ ಪ್ರಾಣತೆತ್ತ ನಾಟಕದ ರಾವಣ! ಅಮೃತಸರ್ ರೈಲು ದುರಂತದಲ್ಲಿ ಬಲಿಯಾದ ರಾವಣ ಪಾತ್ರಧಾರಿ! ನಾಟಕದಲ್ಲಿ ರಾವಣನ ಪಾತ್ರ ಧರಿಸಿದ್ದ ದಲ್ಬೀರ್ ಸಿಂಗ್ ಬಲಿ! ಹಳಿ ಪಕ್ಕ ನಿಂತಿದ್ದ ಜನರನ್ನು ರಕ್ಷಿಸಿ ರೈಲಿಗೆ ಬಲಿಯಾದ ದಲ್ಬೀರ್
ಅಮೃತಸರ(ಅ.20): ದಸರಾ ಹಬ್ಬದ ಆಚರಣೆ ವೇಳೆ ನಡೆದ ರೈಲು ಅಪಘಾತದಲ್ಲಿ ರಾವಣನ ವೇಷ ಧರಿಸಿದ್ದ ಕಲಾವಿದ, ಜನರನ್ನು ರಕ್ಷಿಸಿ ಕೊನೆಯಲ್ಲಿ ತಾನು ಬಲಿಯಾಗಿದ್ದಾನೆ.
ರೈಲು ಹಳಿಯಲ್ಲಿದ್ದ ಏಳೆಂಟು ಮಂದಿಯನ್ನು ಹಳಿಯಿಂದ ದೂರಕ್ಕೆ ತಳ್ಳಿದ ದಲ್ಬೀರ್ ಸಿಂಗ್ ಎಂಬ ರಾವಣ ಪಾತ್ರಧಾರಿ ಕೊನೆಯಲ್ಲಿ ತಾನೇ ರೈಲಿಗೆ ಸಿಲುಕಿ ಜೀವ ತೆತ್ತಿದ್ದಾನೆ.
ರಾಮಲೀಲಾ ಪ್ರದರ್ಶನದಲ್ಲಿ ರಾವಣನ ವೇಷ ಹಾಕಿದ್ದ ದಲ್ಬೀರ್ ಸಿಂಗ್, ತನ್ನ ಪಾತ್ರವಾದ ಬಳಿಕ ರಾವಣ ಸಂಹಾರದ ದೃಶ್ಯ ನೋಡಲು ಹಳಿಯ ಬಳಿ ನಿಂತಿದ್ದ. ಈ ವೇಳೆ ವೇಗವಾಗಿ ಬಂದ ರೈಲು ಜನರ ಮೇಲೆ ಹರಿದಿದೆ. ಕೂಡಲೇ ಹಳಿ ಪಕ್ಕ ನಿಂತಿದ್ದ ಜನರನ್ನು ಸಲ್ಬೀರ್ ಸಿಂಗ್ ರಕ್ಷಿಸಿ ಕೊನೆಗೆ ತಾನೇ ರೈಲಿಗೆ ಬಲಿಯಾಗಿದ್ದಾನೆ. ದಲ್ಬೀರ್ 8 ತಿಂಗಳ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಕಳೆದ ಕೆಲವಾರು ವರ್ಷಗಳಿಂದ ದಲ್ಬೀರ್ ಸಿಂಗ್ ರಾಮಲೀಲಾ ಪ್ರದರ್ಶನದಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸುತ್ತಿದ್ದ. ಈ ಬಾರಿಯ ದಸರಾ ಉತ್ಸವದಲ್ಲಿ ರಾವಣನ ಪಾತ್ರಧಾರಿಯಾಗಿದ್ದ ಅವನ ಮೇಲೆ ರೈಲು ಹರಿದು ಮೃತಪಟ್ಟಿದ್ದಾನೆ. ಇನ್ನು ಸರ್ಕಾರದಿಂದ ಪರಿಹಾರ ಸಿಗುವವರೆಗೆ ದಲ್ಬೀರ್ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
