ಮುಂಬೈ[ಜ.25]: ಸಾಲ ಮರಳಿಸದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ, ತನ್ನ ಸ್ನೇಹಿತನನ್ನು ಹತ್ಯೆಗೈದು, ಬಳಿಕ 200 ತುಂಡುಗಳಾಗಿ ಕತ್ತರಿಸಿದ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ. ಹೀಗೆ ಕತ್ತರಿಸಿದ ದೇಹದ ಭಾಗಗಳನ್ನು ಆರೋಪಿ ಶೌಚಾಲಯದಲ್ಲಿ ಹಾಕಿ ಸಾಕ್ಷ ನಾಶಕ್ಕೆ ಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪಿಂಟು ಶರ್ಮಾ ಎಂಬಾತ ತನ್ನ ಸ್ನೇಹಿತ ಗಣೇಶ್‌ಗೆ ಪ್ರಿಂಟಿಂಗ್‌ ಪ್ರೆಸ್‌ ನಡೆಸಲು 1 ಲಕ್ಷ ರು. ಸಾಲ ನೀಡಿದ್ದ. ಈ ಪೈಕಿ 40000 ರು.ಗಳನ್ನು ಮಾತ್ರವೇ ಗಣೇಶ್‌ ಮರಳಿಸಿದ್ದ. ಉಳಿದ ಹಣ ಪಾವತಿ ಸಂಬಂಧ ಸ್ನೇಹಿತರ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಇತ್ತೀಚೆಗೆ ಕೂಡಾ ಇದೇ ವಿಷಯಕ್ಕೆ ಗಲಾಟೆ ನಡೆದ ವೇಳೆ ಗಣೇಶ್‌ನನ್ನು ಪಿಂಟು ಹತ್ಯೆ ಮಾಡಿದ್ದ. ಬಳಿಕ ದೇಹವನ್ನು 200 ತುಂಡುಗಳಾಗಿ ಕತ್ತರಿಸಿ, ಅದನ್ನು ಶೌಚಾಲಯದಲ್ಲಿ ಹಾಕಿ ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದ.

ಆದರೆ ದೇಹದ ಭಾಗಗಳು ಶೌಚಾಲಯದ ಪೈಪ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪೈಪ್‌ ಸ್ವಚ್ಛಗೊಳಿಸುವ ವೇಳೆ ಪಿಂಟುನ ಕೃತ್ಯ ಬೆಳಕಿಗೆ ಬಂದಿದೆ.