ನವದೆಹಲಿ[ಮೇ.06]: ಫೋನಿ ಚಂಡಮಾರುತದ ಕುರಿತು ವಾಸ್ತವತೆ ತಿಳಿಯಲು ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಜೊತೆ ಮಾತುಕತೆ ನಡೆಸುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ ಆರೋಪಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಫೋನಿ ಕುರಿತು ಚರ್ಚಿಸಲು ಸಿಎಂ ಬ್ಯಾನರ್ಜಿ ಅವರಿಗೆ 2 ಬಾರಿ ಕರೆ ಮಾಡಿದ್ದರು.

ಆದರೆ ಮೋದಿ ಕರೆಯನ್ನು ಬ್ಯಾನರ್ಜಿ ಅವರೇ ಕಡೆಗಣಿಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ, ಕೊನೆಗೆ ಮೋದಿ ಅವರು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿ ನಾಥ್‌ ತ್ರಿಪಾಠಿ ಅವರಿಗೆ ಕರೆ ಮಾಡಿ ಫನಿ ಚಂಡಮಾರುತದ ತೀವ್ರತೆ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ‘ಬ್ಯಾನರ್ಜಿ ಅವರ ಜೊತೆ ಸಂಪರ್ಕ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಿಬ್ಬಂದಿ ಶನಿವಾರ 2 ಬಾರಿ ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ಸಿಎಂ ಬ್ಯಾನರ್ಜಿ ಅವರು ಕಾರ್ಯ ನಿರತರಾಗಿದ್ದಾರೆ.

ಆ ನಂತರ ವಾಪಸ್‌ ಕರೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ, ಮತ್ತೊಂದು ಬಾರಿ ಸಿಎಂ ಅವರು ಪ್ರವಾಸ ಕೈಗೊಂಡಿದ್ದಾರೆ,’ ಎಂದು ತಿಳಿಸಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.