ಆರೋಪಿ ಹೆಸರು ಪದ್ಮಶ್ರೀಗೆ ಶಿಫಾರಸು ಮಾಡಿದ್ದ ಮಹಾರಾಷ್ಟ್ರ

Maharashtra Govt Recommended Sambhaji Bhide For Padma Shri
Highlights

ಜ.1ರಂದು ನಡೆದ ಭೀಮಾ- ಕೋರೆಗಾಂವ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಬಲಪಂಥೀಯ ಮುಖಂಡ ಮನೋಹರ್‌ ಅಲಿಯಾಸ್‌ ಸಂಭಾಜಿ ಭೀಡೆ ಅವರನ್ನು ಮಹಾರಾಷ್ಟ್ರದ ಬಿಜೆಪಿ ಸರ್ಕಾರ 2016ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮುಂಬೈ: ಜ.1ರಂದು ನಡೆದ ಭೀಮಾ- ಕೋರೆಗಾಂವ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಬಲಪಂಥೀಯ ಮುಖಂಡ ಮನೋಹರ್‌ ಅಲಿಯಾಸ್‌ ಸಂಭಾಜಿ ಭೀಡೆ ಅವರನ್ನು ಮಹಾರಾಷ್ಟ್ರದ ಬಿಜೆಪಿ ಸರ್ಕಾರ 2016ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

10 ಹಿರಿಯ ಸಚಿವರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ಪದ್ಮ ಶ್ರೀ ಪ್ರಶಸ್ತಿಗೆ ಭೀಡೆ ಹೆಸರನ್ನು ಶಿಫಾರಸು ಮಾಡಿತ್ತು. ಈ ಸಂಬಂಧ ಸರ್ಕಾರ ಯಾವುದೇ ಅರ್ಜಿಯನ್ನು ಸ್ವೀಕರಿಸದೇ ಇದ್ದರೂ ಸಮಿತಿ ತನ್ನ ವಿವೇಚನೆಯ ಮೇರೆಗೆ ಶಿಫಾರಸು ಮಾಡಿತ್ತು. ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಿಂದ ಈ ಮಾಹಿತಿ ಲಭ್ಯವಾಗಿದೆ.

ವಸತಿ ಸಚಿವ ಪ್ರಕಾಶ್‌ ಮೆಹ್ತಾ ನೇತೃತ್ವದ ಸಮಿತಿ ಇತರ 15 ಹೆಸರುಗಳ ಜೊತೆಗೆ ಭೀಡೆ ಹೆಸರನ್ನು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು 2015ರ ಅ.12ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದೇ ವೇಳೆ ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ ಹಾಗೂ ದಲಿತ ಮುಖಂಡ ಪ್ರಕಾಶ್‌ ಅಂಬೇಡ್ಕರ್‌ ಸರ್ಕಾರದ ತೀರ್ಮಾನ ‘ಬೌದ್ಧಿಕ ದೀವಾಳಿತನ’ ಎಂದು ಟೀಕಿಸಿದ್ದಾರೆ.

 

loader