ಮಹಾರಾಷ್ಟ್ರ[ಸೆ.12]: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಬಸ್ ಒಂದು ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮುಂಬೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಿಂದ ಸುಮಾರು 110 ಕಿ. ಮೀಟರ್ ದೂರದಲ್ಲಿರುವ ಮ್ಹಸವೇ ಹಳ್ಳಿಯ ಬಳಿ ಬೆಳಗ್ಗೆ ಸುಮಾರು 5 ಗಂಟೆಗೆ ಈ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸರು 'ಮುಂಬೈನಿಂದ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ ಒಂದು ಮ್ಹಸವೇ ಹಳ್ಳಿಯ ಬಳಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯ ಮಾಹಿತಿ ಪಡೆದ ಸತಾರಾ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ' ಎಂದಿದ್ದಾರೆ.

ಸತಾರಾ ಪೊಲೀಸ್ ಅಧೀಕ್ಷಕ ತೇಜಸ್ವಿ ಸತ್ಪುತೆ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಮಭೀರವಾಗಿದೆ' ಎಂದಿದ್ದಾರೆ.

ಕತ್ತಲೆ ಇದ್ದ ಕಾರಣ ಚಾಲಕ ಟ್ರಕ್ ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ಅಪಘಾತ ಸಂಭವಿಸಲು ಕಾರಣವೇನು ಎಂಬ ತನಿಖೆ ನಡೆಯುತ್ತಿದೆ.