ಮಹಾವಿರಾಗಿಗೆ ನಾಳೆಯಿಂದ ಮಹಾಮಜ್ಜನ; ಮಹಾಮಸ್ತಕಾಭಿಷೇಕಕ್ಕೆ ಸಜ್ಜಾಗಿದೆ ಶ್ರವಣಬೆಳಗೊಳ

First Published 6, Feb 2018, 11:09 AM IST
Mahamastakabhisheka begins  from tomorrow in Shravanabelagola
Highlights

ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟದ ಮೇಲೆ ಮಂದಸ್ಮಿತನಾಗಿ ನಿಂತು ವಿಶ್ವಕ್ಕೆ ಶಾಂತಿಯ ಸಂದೇಶ ಬಿತ್ತುತ್ತಿರುವ ಮಹಾನ್ ಮಂಗಳಮೂರ್ತಿ ಬಾಹುಬಲಿಗೆ ಮತ್ತೊಂದು ಮಹಾ ಮಜ್ಜನದ ಸಂಭ್ರಮ. ದಕ್ಷಿಣ ಭಾರತದಲ್ಲಿ ಜೈನರ ಪ್ರಮುಖ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರದಲ್ಲಿ ಈ ಮಹಾಮಜ್ಜನಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.

ಬೆಂಗಳೂರು (ಫೆ.06): ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟದ ಮೇಲೆ ಮಂದಸ್ಮಿತನಾಗಿ ನಿಂತು ವಿಶ್ವಕ್ಕೆ ಶಾಂತಿಯ ಸಂದೇಶ ಬಿತ್ತುತ್ತಿರುವ ಮಹಾನ್ ಮಂಗಳಮೂರ್ತಿ ಬಾಹುಬಲಿಗೆ ಮತ್ತೊಂದು ಮಹಾ ಮಜ್ಜನದ ಸಂಭ್ರಮ. ದಕ್ಷಿಣ ಭಾರತದಲ್ಲಿ ಜೈನರ ಪ್ರಮುಖ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರದಲ್ಲಿ ಈ ಮಹಾಮಜ್ಜನಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.

ಫೆ.7 ರಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದ್ದು, ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ಹರಿದು ಬರಲಿದ್ದಾರೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ವಿಶೇಷ ಮಜ್ಜನವನ್ನು ನೋಡಲು ಸಾವಿರಾರು ಜೈನ ಮುನಿಗಳು ಕರ್ನಾಟಕದ ಈ ಸಣ್ಣನಗರಿಯಲ್ಲಿ ಬಂದು ಸೇರುತ್ತಾರೆ.

ಏನಿದು ಮಹಾಮಸ್ತಕಾಭಿಷೇಕ?

ಜೈನರ ಮೊದಲ ತೀರ್ಥಂಕರ ಆದಿನಾಥ ಅವರ ಪುತ್ರನೇ ಬಾಹುಬಲಿ. ಸಹೋದರ ಭರತ ಚರ್ಕವರ್ತಿಯ ಜತೆಗೆ ನಡೆದ ಕಾಳಗದ ಬಳಿಕ ರಾಜ್ಯಾಧಿಕಾರದಿಂದ ನಿರಾಸಕ್ತನಾಗಿ ಮೋಕ್ಷಪ್ರಾಪ್ತಿಗಾಗಿ ತಪಸ್ಸಿಗೆ ಕುಳಿತ ಮಹಾ ವಿರಾಗಿ ಈ ಬಾಹುಬಲಿ. ಸುಮಾರು 12 ತಿಂಗಳು ನಿಂತುಕೊಂಡೇ ಕಠೋರ ತಪಸ್ಸು ಮಾಡಿದ ಬಾಹುಬಲಿ ಜೈನರ ಪಾಲಿಗೆ ಆರಾಧ್ಯ ದೇವ. ಇಂಥ ವಿರಾಗಿಗೆ ಸಾವಿರಕ್ಕೂ ಹೆಚ್ಚು ವರ್ಷಗಳಿಂದ 12 ವರ್ಷಕ್ಕೊಮ್ಮೆ ನಡೆದುಕೊಂಡು ಬಂದಿರುವ ಮಹಾ ಮಜ್ಜನವೇ ಮಹಾಮಸ್ತಕಾಭಿಷೇಕ. ಇದು ಜೈನರ ಪಾಲಿಗೆ ಪವಿತ್ರ ಕಾರ್ಯ. ಇದನ್ನು ಕಣ್ತುಂಬಿಕೊಳ್ಳುವುದೇ ಅಪೂರ್ವ ಕ್ಷಣ.

12 ವರ್ಷಗಳಿಗೊಮ್ಮೆ ಏಕೆ?

ಯುದ್ಧಗಳಲ್ಲಿ ಆದ ರಕ್ತಕ್ರಾಂತಿ ಮತ್ತು ಅನಾಹುತಗಳನ್ನು ಕಂಡ ಬಾಹುಬಲಿ ಮೋಕ್ಷ ಪಡೆಯಲು 12 ತಿಂಗಳ ತಪಸ್ಸು ಮಾಡಿದ್ದು ಮತ್ತು ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಏಕಶಿಲಾ ಮೂರ್ತಿಯನ್ನು ಕೆತ್ತಲು 12 ವರ್ಷ ತೆಗೆದುಕೊಂಡದ್ದು ಮತ್ತು ಯುಗ ಪರಿವರ್ತನೆ ಕೂಡ 12 ತಿಂಗಳಿಗೊಮ್ಮೆ ಆಗುತ್ತದೆ ಎನ್ನುವ ಕಾರಣಗಳಿಗೆ ಶ್ರವಣಬೆಳಗೊಳದ ವಿರಾಗಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಮಾಡುವ ಪರಂಪರೆ ಅನೂಚಾನಾಗಿ ನಡೆದುಕೊಂಡು ಬಂದಿದೆ.

ಆಚರಣೆ ಹೇಗೆ?

ಮಹಾಮಸ್ತಕಾಭಿಷೇಕದ ತಯಾರಿ 18 ದಿನ ಮೊದಲೇ ಆರಂಭವಾಗುತ್ತದೆ. ಮಸ್ತಕಾಭಿಷೇಕ ಆರಂಭವಾಗುವ ಮೊದಲ ದಿನ ಬೆಳ್ಳಂಬೆಳಗ್ಗೆ ಭಕ್ತರು 1008 ಕಲಶಗಳನ್ನು ಬಾಹುಬಲಿ ಮೂರ್ತಿಯ ಕಾಲಿನಡಿ ಇಟ್ಟು ಪೂಜೆ ಮಾಡುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಜೈನಮುನಿಗಳು ಮಂತ್ರಗಳನ್ನು ಪಠಿಸುತ್ತಾರೆ. ನಂತರ ಭಕ್ತರು ಬಾಹುಬಲಿಯ ಹಿಂಬದಿಯಲ್ಲಿ 600 ಕ್ಕೂ ಹೆಚ್ಚು ಮೆಟ್ಟಿಲುಗಳುಳ್ಳ

ಅಟ್ಟಣಿಗೆಯನ್ನೇರಿ ಅಭಿಷೇಕ ಮಾಡುತ್ತಾರೆ. ಹಾಲು, ಅರಿಶಿನ, ಎಳನೀರು, ಚಂದನ, ಕಬ್ಬಿನ ಹಾಲು, ಸಿಂಧೂರ ಸೇರಿದಂತೆ ಮತ್ತು ವಿವಿಧ ಬಗೆಯ ಹಾಲಿನ ಮಜ್ಜನ ಭಗವಾನ್ ಬಾಹುಬಲಿಗೆ ಮಾಡಲಾಗುತ್ತದೆ. ಆ ಬಳಿಕ ಬಾಹುಬಲಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು  ಅರ್ಪಿಸಲಾಗುತ್ತದೆ. ಸುಮಾರು 10 ಗಂಟೆ ಕಾಲ ನಡೆಯಲಿರುವ ಈ ಅಭಿಷೇಕ ವೇಳೆ ಲಕ್ಷಾಂತರ ಮಂದಿ ಪಾಲ್ಗೊಂಡು ವಿರಾಗಿಗೆ ಭಕ್ತಿ ಸಮರ್ಪಿಸುತ್ತಾರೆ. ಜೈನರ ಪಾಲಿಗಿದು ಅತ್ಯಂತ ಮಹತ್ವದ ಹಾಗೂ ಆತ್ಮೋಧ್ಧಾರಕ್ಕೆ ಸಿಗುವ ಅಪರೂಪದ ಅವಕಾಶ.

ಎಲ್ಲಿ ನಡೆಯುತ್ತದೆ?

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ. ಶ್ರೀ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿದೆ. ಇಲ್ಲಿರುವುದು ವಿಶ್ವದ ಅತಿ ಎತ್ತರದ ಏಕಶಿಲಾ ಮೂರ್ತಿ. ಇದರ ಎತ್ತರ 57  ಅಡಿ.

ಯಾರು ಕೆತ್ತಿದ್ದು?

ಬಾಹುಬಲಿಯ ಮೂರ್ತಿಯ ಪ್ರತಿಷ್ಠಾಪನೆ ಕೂಡ ಬಾಹುಬಲಿಯ ಬದುಕಿನಷ್ಟೇ ರೋಚಕ ಕಥೆ. ಪ್ರತಿಷ್ಠಾಪನೆಯಾದುದು ಕ್ರಿ.ಶ.981 ರಲ್ಲಿ. ಎಷ್ಟು ದಿನ, ಯಾವ ಶಿಲ್ಪಿ ಈ ಮೂರ್ತಿಯನ್ನು ಕಟೆದು ನಿಲ್ಲಿಸಿದರು ಎಂಬುದಕ್ಕೆ ನಿಶ್ಚಿತವಾಗಿ ಹೇಳುವಂಥ

ಆಧಾರಗಳಿಲ್ಲ. ಗಂಗರಸರ ಸಾಮಂತ ರಾಜ ಚಾವುಂಡರಾಯನ ಆಶಯದಂತೆ ಈ ಮೂರ್ತಿ ನಿರ್ಮಾಣವಾಗಿದೆ. ಸಾವಿರಾರು ಜನ ಸೇರಿ ಈ ಮೂರ್ತಿಯನ್ನು ಕೆತ್ತಿರಬೇಕೆಂಬುದು ಬಹುತೇಕರು ಹೇಳುತ್ತಾರೆ. ಜತೆಗೆ ‘ಅರಿಷ್ಟ ನೇಮಿ’ ಎಂಬ ಶಿಲ್ಪಿ ಕೆತ್ತಿರಬೇಕು ಎಂಬ ಪ್ರತೀತಿ ಇದೆ.

ಮಸ್ತಕಾಭಿಷೇಕ ಇತಿಹಾಸ

ಮಹಾಮಸ್ತಕಾಭಿಷೇಕಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯಾದ ಬೆನ್ನಲ್ಲೇ ಈ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸುವ ಸಂಪ್ರದಾಯ ಆರಂಭವಾಯಿತು ಎನ್ನಲಾಗುತ್ತದೆ. ಅಂದರೆ ಕ್ರಿ.ಶ.981 ರಿಂದಲೇ ಮೊದಲ ಅಭಿಷೇಕ ಆರಂಭವಾಯಿತು. ಆ ನಂತರ 12 ವರ್ಷಗಳಿಗೊಮ್ಮೆ ಈ ಸಂಪ್ರದಾಯ ಅನೂಚಾನಾಗಿ ನಡೆದುಕೊಂಡು ಬಂದಿದೆ. ಶಾಸನಗಳಲ್ಲಿ ಈ ರೀತಿಯ ಮಜ್ಜನ ಕ್ರಿ.ಶ.1398 ರಲ್ಲಿ ನಡೆದ ಬಗ್ಗೆ ಮೊದಲ ಉಲ್ಲೇಖ ಸಿಗುತ್ತದೆ. ಇತ್ತೀಚೆಗೆ ನಡೆದದ್ದು 2006 ರಲ್ಲಿ.

ಜರ್ಮನ್ ತಂತ್ರಜ್ಞಾನ

ಶ್ರವಣಬೆಳಗೊಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಾಮಸ್ತಕಾಭಿಷೇಕಕ್ಕಾಗಿ ಜರ್ಮನ್ ತಂತ್ರಜ್ಞಾನದ ಅಟ್ಟಣಿಗೆ ನಿರ್ಮಿಸಲಾಗಿದೆ. ಬಾಹುಬಲಿ ಪ್ರತಿಮೆಯ ಹಿಂದೆ ನಿರ್ಮಿಸಲಾಗಿರುವ ಅಟ್ಟಣಿಗೆಗಾಗಿ ₹15  ಕೋಟಿ ವೆಚ್ಚಮಾಡಲಾಗಿದೆ. ಇದು ‘ರಿಂಗ್-ಲಾಕ್’ ವ್ಯವಸ್ಥೆಯ ಅಟ್ಟಣಿಗೆ. ಹಿಂದಿನ ಬೇರೆ ಅಟ್ಟಣಿಗೆಗಳಿಗೆ ಹೋಲಿಸಿದರೆ ಇದು ಹೆಚ್ಚು ಸುರಕ್ಷಿತ. ಈ ಬಾರಿ 15 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಲಾಗಿದೆ.

 

loader