ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕುಮಾರ ಪರ್ವತದ ತುದಿಯಲ್ಲಿರುವ ಕುಮಾರ ಪಾದಕ್ಕೆ ಬಹುಳ ಷಷ್ಠಿಯಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಪರ್ವತವು, ಚಾರಣಿಗರ ನೆಚ್ಚಿನ ತಾಣವೂ ಆಗಿದ್ದು, ಇದರ ಪಾವಿತ್ರ್ಯತೆ ಕಾಪಾಡುವುದು ಮುಖ್ಯವಾಗಿದೆ.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕುಮಾರ ಪರ್ವತ ಯಾತ್ರೆ ಹಾಗೂ ಕುಮಾರ ಪಾದಕ್ಕೆ ಪೂಜೆ ಪೂರ್ವಶಿಷ್ಟ ಸಂಪ್ರದಾಯದಂತೆ ಬಹುಳ ಷಷ್ಠಿಯ ದಿನ ಬುಧವಾರ ಜರುಗಿತು. ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದ ಮತ್ತು ಸಮೀಪದಲ್ಲಿರುವ ವಾಸುಕಿಗೆ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಪೂಜೆ ಮತ್ತು ಅಭಿಷೇಕ ನೆರವೇರಿಸಿದರು. ಬಳಿಕ ಪ್ರಸಾದ ವಿತರಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಸೇರಿದಂತೆ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.
ಭಕ್ತರ ಕೆಲ ತಂಡ ದೇವರ ಗದ್ದೆ ಮೂಲಕ ಕುಮಾರ ಪರ್ವತ ಯಾತ್ರೆ ಮಾಡಿದರೆ, ಇನ್ನೊಂದು ತಂಡ ಸೋಮವಾರ ಪೇಟೆಯ ಭಾಗದಿಂದ ಕುಮಾರಪರ್ವತ ಯಾತ್ರೆ ಕೈಗೊಂಡರು. ಚಂಪಾಷಷ್ಠಿ ಮಹೋತ್ಸವದ ಬಳಿಕ ಕುಮಾರ ಪರ್ವತ ಯಾತ್ರೆ ನಡೆಯುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಕುಮಾರ ಪರ್ವತಕ್ಕೂ ಪವಿತ್ರ ಸಂಬಂಧವಿದೆ.
ಪೌರಾಣಿಕ ಹಿನ್ನೆಲೆ:
ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರಾ ನದಿಯಲ್ಲಿ ತೊಳೆದನು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದನು ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ತಾರಕಾದಿ ರಾಕ್ಷಸರನ್ನು ಕುಮಾರಸ್ವಾಮಿ ಈ ಪರ್ವತ ಶ್ರೇಣಿಯಲ್ಲೇ ವಧೆ ಮಾಡಿದನು. ಈ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ(ಚಂಪಾಷಷ್ಠಿ)ಯ ದಿನ ದೇವೇಂದ್ರನ ಮಗಳಾದ ದೇವಸೇನೆಯನ್ನು ಷಣ್ಮುಖನಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿಸಲಾಯಿತು. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರಾ ನದಿಯಾಯಿತು ಎಂದೂ ಪುರಾಣಗಳು ಉಲ್ಲೇಖಿಸಿವೆ. ಕುಮಾರಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಇವೆ. ಇದನ್ನು ಕುಮಾರಪಾದ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ “ಬಹುಳ ಷಷ್ಠಿ”ಯಂದು ಕುಕ್ಕೆ ದೇಗುಲದ ಪ್ರಧಾನ ಅರ್ಚಕರು ಪೂಜೆ ಸಲ್ಲಿಸುತ್ತಾರೆ.
ಬೆಟ್ಟ ಕೇವಲ ಚಾರಣಕ್ಕೆ ಮಾತ್ರವಲ್ಲ, ಧಾರ್ಮಿಕ ಹಿನ್ನೆಲೆಯೂ ಇದೆ
ದೇಶದ ಮೂಲೆ ಮೂಲೆಯಿಂದ ಚಾರಣ ಪ್ರಿಯರು ಪ್ರಕೃತಿ ಮಾತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕುಮಾರಪರ್ವತಕ್ಕೆ ಬರುತ್ತಾರೆ. ಇದು ಕೇವಲ ಚಾರಣಕಷ್ಟೇ ಜನಪ್ರಿಯವಾಗದೆ, ಪೌರಾಣಿಕ ಹಾಗೂ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಇಂತಹ ಪುಣ್ಯ ಸ್ಥಳಕ್ಕೆ ಬರುವವರು ಬೆಚ್ಚವನ್ನು ಪೂಜನೀಯವಾಗಿ ಕಾಣಿ ಮತ್ತು ಶುಚಿತ್ವವನ್ನು ಕಾಪಾಡಿ.


