ಪಣಜಿ[ಸೆ.13]:  ಕರ್ನಾಟಕ ಹಾಗೂ ಗೋವಾ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಿ ಸಂಧಾನ ಅಥವಾ ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥ ಪ್ರಶ್ನೆಯೇ ಇಲ್ಲ ಎಂದು ಗೋವಾ ಕಡ್ಡಿ ಮುರಿದಂತೆ ಹೇಳಿದೆ.

ಇದು ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಬಿಜೆಪಿ ಸರ್ಕಾರ ಬಂದ ಕಾರಣ ನದಿ ನೀರು ವಿವಾದ ಮಾತುಕತೆ ಮೂಲಕ ಇತ್ಯರ್ಥವಾಗಬಹುದು ಎಂಬ ನಿರೀಕ್ಷೆಯನ್ನು ಹುಸಿಯಾಗಿಸಿದೆ.

ಗುರುವಾರ ಇಲ್ಲಿ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು, ಮಹದಾಯಿ ವಿಚಾರದಲ್ಲಿ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಗೊಳಿಸುವುದು ಅಥವಾ ರಾಜೀ ಸಂಧಾನಕ್ಕೆ ಅವಕಾಶವಿಲ್ಲ. ಮಹದಾಯಿ ನದಿಯನ್ನು ಕರ್ನಾಟಕ ತಿರುಗಿಸಬಾರದು ಎಂಬ ನಿಲುವಿಗೆ ಗೋವಾ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮಹದಾಯಿ ವಿಷಯವಾಗಿ ಕರ್ನಾಟಕ ಹಾಗೂ ಗೋವಾ ಮಾತುಕತೆಗೆ ಕೂತು, ವಿವಾದ ಬಗೆಹರಿಸಿಕೊಳ್ಳಬೇಕು. ಈ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಈಗಾಗಲೇ ಮಾತನಾಡಿದ್ದೇನೆ. ಗೋವಾ ಜತೆಗೂ ಮಾತನಾಡುತ್ತೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದರು. ಈ ನಡುವೆ, ಸೆಪ್ಟೆಂಬರ್‌ ಮೊದಲ ವಾರದಲ್ಲಿ ಯಡಿಯೂರಪ್ಪ ಅವರು ಮಹಾರಾಷ್ಟ್ರಕ್ಕೆ ತೆರಳಿ ಮಹದಾಯಿ ವಿಚಾರದಲ್ಲಿ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದರು. ಅದಕ್ಕೆ ಈಗ ಭಾರಿ ಹಿನ್ನಡೆಯಾಗಿದೆ.

ಜೋಶಿ ಅವರ ಸಂಧಾನ ಪ್ರಸ್ತಾವಕ್ಕೆ ಗೋವಾ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನದಿ ವಿವಾದ ಕುರಿತು ಈಗಾಗಲೇ ನ್ಯಾಯಾಧಿಕರಣ ಐತೀರ್ಪು ಕೊಟ್ಟಾಗಿದೆ. ಹೀಗಾಗಿ ಮಾತುಕತೆಗೆ ಅವಕಾಶವೇ ಇಲ್ಲ ಎಂದು ಪ್ರತಿಪಕ್ಷ ನಾಯಕ ದಿಗಂಬರ ಕಾಮತ್‌ ಸೋಮವಾರ ಹೇಳಿದ್ದರು.

2018ರ ಆಗಸ್ಟ್‌ನಲ್ಲಿ ಮಹದಾಯಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದ್ದು, ಅದರ ವಿರುದ್ಧ ಕರ್ನಾಟಕ ಹಾಗೂ ಗೋವಾ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ.