ಭೋಪಾಲ್[ಸೆ.12]: ಜೂನ್ ತಿಂಗಳಾದರೂ ಮಳೆ ಬಾರದೆ ಕಂಗಾಲಾಗಿದ್ದ ಜನ ಮೂಢನಂಬಿಕೆ ಪಾಲಿಸಿದ್ದರು. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಮಳೆ ಬರಲು ಕಪ್ಪೆಗಳ ಮದುವೆ ಮಾಡಿಸಿದ್ದರು. ಆದರೆ ನೀವೆಂದಾದರೂ ಈ ಕಪ್ಪೆಗಳಿಗೆ ವಿಚ್ಛೇದನ ಮಾಡಿಸಿರುವುದನ್ನು ಕೇಳಿದ್ದೀರಾ? ಇಲ್ಲಿದೆ ನೋಡಿ ಕಪ್ಪೆಗಳ ಭಾವನೆ ಕಸಿದ ಮನುಷ್ಯನ ಮೂಢನಂಬಿಕೆಯ ಸ್ಟೋರಿ. ಮದುವೆ ಬಳಿಕ ಈಗ ವಿಚ್ಛೇದನದ ಡ್ರಾಮಾ.

ಹೌದು ಸುಡುತ್ತಿದ್ದ ಬಿಸಿಲು, ಮಳೆ ಬರುವ ಯಾವುದೇ ಲಕ್ಷಣಗಳಿಲ್ಲ. ಹೀಗಿರುವಾಗ ಮನುಷ್ಯರು ಮೂಢನಂಬಿಕೆಯಂತೆ ಕಪ್ಪೆಗಳಿಗೆ ಅದ್ಧೂರಿ ಮದುವೆ ಮಾಡಿಸಿದ್ದರು. ರಾಜ್ಯದಲ್ಲಿ ಉಡುಪಿಯಲ್ಲಿ ನಡೆದ ಕಪ್ಪೆಗಳ ಮದುವೆ ಭಾರೀ ಸೌಂಡ್ ಮಾಡಿತ್ತು. ಇಂತಹುದೇ ಮದುವೆ ಮಧ್ಯಪ್ರದೇಶದ ಭೋಪಾಲ್ ನಲ್ಲೂ ನಡೆದಿತ್ತು. ಕಾಕತಾಳೀಯವೆಂಬಂತೆ ಕಪ್ಪೆಗಳ ಮದುವೆ ಮಾಡಿಸಿದ ಬೆನ್ನಲ್ಲೇ ಧಾರಾಕಾರ ಮಳೆ ಸುರಿದಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆರಾಯ ಸಾಕು ನೀ ಬರಬೇಡ ಎಂದರೂ, ಹಠಕ್ಕೆ ಬಿದ್ದಿರುವ ಮಳೆರಾಯ ಸುರಿಯುತ್ತಲೇ ಇದ್ದಾನೆ. ವರುಣನ ಈ ಅಬ್ಬರಕ್ಕೆ ಬೆಚ್ಚಿ ಬಿದ್ದಿರುವ ಭೋಪಾಲ್ ಜನತೆ ಮದುವೆ ಮಾಡಿಸಿದ್ದ ಕಪ್ಪೆಗಳಿಗೆ ವಿಚ್ಚೇದನ ಕೊಡಿಸಿದ್ದಾರೆ.

ಮಳೆಗಾಗಿ ನಡೆಯಿತು ಮಂಡೂಕನ ಮದುವೆ: ಭರ್ಜರಿ ಭೋಜನ

ಮಳೆ ಇಲ್ಲದೇ ಕಂಗೆಟ್ಟಿದ್ದ ಭೋಪಾಲ್ ಜನತೆ ವರುಣನನ್ನು ಓಲೈಸಲು ಜುಲೈ 19ರಂದು ಅದ್ಧೂರಿಯಾಗಿ ಕಪ್ಪೆಗಳ ಮದುವೆ ಮಾಡಿಸಿತ್ತು. ಆದರೆ ಸೆಪ್ಟೆಂಬರ್ 11ರೊಳಗೆ ಮಧ್ಯಪ್ರದೇಶದಲ್ಲಿ ವಾಡಿಕೆಗಿಂತ ಶೇ. 26ರಷ್ಟು ಹೆಚ್ಚು ಮಳೆಯಾಗಿದ್ದು, ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಭೋಪಾಲ್ ನಲ್ಲಿ ಸುರಿದ ಭಾರೀ ಮಳೆ ಸುಮಾರು 13 ವರ್ಷದ ದಾಖಲೆಯನ್ನೇ ಮುರಿದಿದೆ. 

ಸೆ. 11ರಿಂದ 12ರವರೆಗೆ, 24 ಗಂಟೆಗಳಲ್ಲಿ ಭೋಪಾಲ್ ನಲ್ಲಿ 48 ಮಿ.ಮೀ ಮಳೆ ಸುರಿದಿದೆ. ಭೋಪಾಲ್ ನ ಕಲಿಯಾಸೋಟ್ ಡ್ಯಾಂ ಹಾಗೂ ಭಾದ್ಬದಾ ಡ್ಯಾಂ ಭರ್ತಿಯಾಗಿದ್ದು, ತಲಾ 2 ಗೇಟ್ ಗಳನ್ನು ತೆರೆಯಲಾಗಿದೆ. ಅಲ್ಲದೇ ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ಕೋಲಾರ್ ಡ್ಯಾಂ ಗೇಟ್ ಗಳನ್ನೂ ತೆರೆಯಲಾಗಿದೆ.

ಭಾರೀ ಮಳೆಯಿಂದಾಗಿ ಭೋಪಾಲ್ ನ ತಗ್ಗು ಪ್ರದೇಶಗಳಲ್ಲಿ ಪ್ರವಾಹ ನಿರ್ಮಾಣವಾಗಿದೆ. ವರುಣನ ಆರ್ಭಟದಿಂದ ಬೆಚ್ಚಿ ಬಿದ್ದಿರುವ ಇಲ್ಲಿನ ಓಂ ಶಿವ ಸೇನಾ ಶಕ್ತಿ ಮಂಡಳಿ, ಇನ್ನು ಯಾವುದೇ ಅಪಾಯವಾಗದಿರಲಿ ಎಂದು ಬುಧವಾರದಂದು ಸಾಂಕೇತಿಕವಾಗಿ ಕಪ್ಪೆಗಳಿಗೆ ವಿಚ್ಛೇದನ ಮಾಡಿಸಿದ್ದಾರೆ.

ಉಡುಪಿಯಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ

ವಿಚ್ಛೇದನ ಕಾರ್ಯಕ್ರಮವನ್ನೂ ಅದ್ಧೂರಿಯಾಗಿ ನಡೆಸಿದ್ದು, ಮಂತ್ರಗಳನ್ನು ಪಠಿಸುತ್ತಾ ಕಪ್ಪೆಗಳನ್ನು ದೂರ ಮಾಡಲಾಗಿದೆ. ವಿಚ್ಚೇದನ ಮಾಡಿಸಿರುವುದರಿಂದ ಮಳೆ ನಿಲ್ಲಲಿದೆ ಎಂಬುವುದು ಓಂ ಶಿವ ಸೇನಾ ಶಕ್ತಿ ಮಂಡಳಿ ಸದಸ್ಯರ ನಂಬಿಕೆ.