ಉಡುಪಿ : ಈ ಬಾರಿ ಕರಾವಳಿಯಲ್ಲಿ ಸುಮಾರು ಒಂದು ತಿಂಗಳು ಮಳೆಗಾಲ ವಿಳಂಭವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಉಡುಪಿಯಲ್ಲಿ ಕಪ್ಪೆಗಳ ಮದುವೆ ನಡೆಸಲಾಯಿತು. 

ಕಪ್ಪೆಗಳಿಗೆ ಮದುವೆ ಮಾಡಿಸಿದರೇ ಮಳೆ ಬರುತ್ತದೆ ಎನ್ನುವುದು ಮೂಢನಂಬಿಕೆ ಎನ್ನುವ ಸಾಕಷ್ಟು ಟೀಕೆಗಳ ನಡುವೆಯೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಈ ಮದುವೆಯನ್ನು ಮಾಡಿಸಿದೆ.

ಮೊದಲು ಗಂಡು ಕಪ್ಪೆ ಮತ್ತು ಹೆಣ್ಣು ಕಪ್ಪೆಗಳನ್ನು ಬೋನಿನೊಳಗಿಟ್ಟು, ಅದನ್ನು ಅಲಂಕೃತ ಸೈಕಲ್ ರಿಕ್ಷಾದಲ್ಲಿ, ಮಾರುತಿ ವಿಥಿಕಾದಲ್ಲಿರುವ ಟ್ರಸ್ಟ್ ಕಚೇರಿಯಿಂದ, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್ ವಾದ್ಯಗಳೊಂದಿಗೆ ಕಿದಿಯೂರು ಹೊಟೇಲಿನವರೆಗೆ ಮೆರವಣಿಗೆಯಲ್ಲಿ ತರಲಾಯಿತು. ನಂತರ ಅಲ್ಲಿ ಸಾರ್ವಜನಿಕರ ಮುಂದೆ ಮಂಗಳವಾದ್ಯದ ನಡುವೆ ಹೆಣ್ಣು ಕಪ್ಪೆಗೆ ತಾಳಿಯನ್ನು ತೊಡಿಸಲಾಯಿತು. ಮುತೈದೆಯರು ಗಂಡ ಹೆಂಡತಿ ಕಪ್ಪೆಗಳಿಗೆ ಆರತಿ ಬೆಳಗಿ, ಶೋಭಾನೆ ಹಾಡಿದರು. ನಂತರ ವಂಶಾಭಿವೃದ್ಧಿಗಾಗಿ ಈ ಎರಡೂ ಕಪ್ಪೆಗಳನ್ನು ತೆಗೆದುಕೊಂಡು ಹೋಗಿ ಮಣಿಪಾಲದಲ್ಲಿರುವ ವಿಸ್ತಾರವಾದ ಮಣ್ಣಪಳ್ಳ ಕೆರೆಗೆ ಬಿಡಲಾಗಿದೆ ಎಂದು ಟ್ರಸ್ಟಿ ಅಧ್ಯಕ್ಷ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ಅನಾಟಮಿ ಟೆಸ್ಟ್ ಮಾಡಿಸಿದ್ದರು

ಉಡುಪಿ ನಗರ ಕಲ್ಸಂಕ ಎಂಬಲ್ಲಿ ಗಂಡು ಕಪ್ಪೆಯನ್ನು ಸಂಗ್ರಹಿಸಲಾಗಿತ್ತು ಮತ್ತು ಅದಕ್ಕೆ ವರುಣ ಎಂದು ಹೆಸರಿಡಲಾಗಿತ್ತು. ಕೀಳಿಂಜೆ ಗ್ರಾಮದಲ್ಲಿ ಹೆಣ್ಣು ಕಪ್ಪೆಯನ್ನು ಹಿಡಿದು, ಅದಕ್ಕೆ ವರ್ಷ ಎಂದು ಕರೆಯಲಾಗಿತ್ತು. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗದಲ್ಲಿ ಅವುಗಳನ್ನು ಗಂಡು ಹೆಣ್ಣು ಎಂದು ದೃಡಪಡಿಸಲಾಗಿತ್ತು ಎಂದು ಟ್ರಸ್ಟ್ ನ ಸದಸ್ಯ ತಾರಾನಾಥ ಮೇಸ್ತ ತಿಳಿಸಿದ್ದಾರೆ. 

ಕೇರಳಕ್ಕೆ ಮುಂಗಾರು : ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್

ಈ ಕಪ್ಪೆ ಮದುವೆಯನ್ನು ನೋಡುವುದಕ್ಕೆ ಸಾಕಷ್ಟು ಮಂದಿ ಆಗಮಿಸಿದ್ದರು. ಕೆಲವರು  ಮದುವೆಯ ಸಂಭ್ರಮದಿಂದ ಬಂದಿದ್ದರೇ, ಇನ್ನು ಕೆಲವರು ಕಪ್ಪೆಗಳಿಗೆ ಮದುವೆ ಹೇಗೆ ಮಾಡಿಸುತ್ತಾರೆ ಎಂಬ ಕುತೂಹಲದಿಂದ ಬಂದಿದ್ದರು. 

ಹಿಂದೆ ಸೀಮಂತ ಮಾಡಿಸಿದ್ದರು

ಇಂತಹ ವಿಚಿತ್ರ ಕೆಲಸಗಳಿಂದ ಸದಾ ಪ್ರಚಾರದಲ್ಲಿರುವ ನಿತ್ಯಾನಂದ ಒಳಕಾಡು ಅವರು 2012ರಲ್ಲಿಯೂ ಮಳೆ ವಿಳಂಭವಾದಾಗ, ಪ್ರಥಮ ಬಾರಿಗೆ ಉಡುಪಿಯಲ್ಲಿ ಕಪ್ಪೆಗಳ ಮದುವೆ ಮಾಡಿಸಿದ್ದರು. ನಂತರ 2014ರಲ್ಲಿ ಮತ್ತೇ ಮಳೆ ಸಮಸ್ಯೆಯಾದಾಗ ಹೆಣ್ಣು ಕಪ್ಪೆಗೆ ಸೀಮಂತ, 2015ರಲ್ಲಿ ಕಪ್ಪೆ ಮರಿಗೆ ತೊಟ್ಟಿಲ ಶಾಸ್ತ್ರ ಮಾಡಿಸಿ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣರಾಗಿದ್ದರು. 

‘ಇಲ್ಲಿ ಮಳೆಗಾಗಿ ಮೊರೆ ಹೋದ್ರೆ ಮಳೆಯಾಗೋದು ಖಚಿತ’
ಕಾಕತಾಳೀಯ ಎಂಬಂತೆ ಪ್ರತಿಬಾರಿಯೂ ಒಳಕಾಡು ಅವರು ಮದುವೆ, ಸಿಮಂತ ಮಾಡಿಸಿದ ಮೇಲೆ ಉಡುಪಿಯಲ್ಲಿ ಮಳೆಯಾಗಿದೆ. ಈ ಬಾರಿಯೂ ಜೂ.10ರೊಳಗೆ ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕಪ್ಪೆಗೆ ಮದುವೆ ಮಾಡಿಸಿದರೇ ಮಳೆಯಾಗುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇನೆ, ಅದರಂತೆ ನಂಬಿಕೆಯಿಂದ ಈ ಮದುವೆ ಮಾಡಿಸಿದ್ದೇನೆ. ಉಡುಪಿಯಲ್ಲಿ ಮನುಷ್ಯರಿಗೆ ಮಾತ್ರವಲ್ಲ ಕಪ್ಪೆಗಳಿಗೂ ಬದುಕುವುದಕ್ಕೆ ನೀರಿಲ್ಲ. ಕಪ್ಪೆಗಳ ಸಂತತಿಯೇ ವಿನಾಶದ ಅಂಚಿನಲ್ಲಿದೆ. ನಾವು ಒಂದು ವಾರ ಈ ಕಪ್ಪೆಗಳಿಗಾಗಿ ಹುಡುಕಾಡಿದ್ದೇವೆ. ಕಪ್ಪೆಗಳ ಸಂತತಿ ಹೆಚ್ಚಬೇಕು, ಆಗ ಮಾತ್ರ ಮಳೆಬೆಳೆ ಚೆನ್ನಾಗಿ ಆಗುತ್ತದೆ. ಅದಕ್ಕಾಗಿ ಗಂಡು ಹೆಣ್ಣು ಕಪ್ಪೆಗೆ ಮದುವೆ ಮಾಡಿಸಿ, ಮಣ್ಣಪಳ್ಳ ಕೆರೆಗೆ ಬಿಡುತ್ತೇವೆ.

          ನಿತ್ಯಾನಂದ ಒಳಕಾಡು, ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ