ಚಂದ್ರ ಇವತ್ತಿನಂತೆ ಇನ್ನು ಕಾಣೋದು 104 ವರ್ಷದ ನಂತರ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 12:35 PM IST
Lunar eclipse 2018 All you want to know
Highlights

ಈ ಶತಮಾನದ ಅತ್ಯಂತ ಸುದೀರ್ಘ ಖಗ್ರಾಸ ಚಂದ್ರ ಗ್ರಹಣಕ್ಕೆ ಇಡೀ ವಿಶ್ವವೇ ಇಂದು ಸಾಕ್ಷಿಯಾಗಲಿದೆ. ಭಾರತದ ಬಹುತೇಕ ಕಡೆ ಈ ಗ್ರಹಣ ಗೋಚರಿಸಲಿದೆ. 103 ನಿಮಿಷ ಹುಣ್ಣಿಮೆಯ ಬೆಳ್ಳಗಿನ ಚಂದಿರ ರಕ್ತ ಚಂದಿರನಾಗಿ ಬದಲಾಗಲಿದ್ದಾನೆ. ಈ ವಿದ್ಯಮಾನವನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.

ಬೆಂಗಳೂರು[ಜು.27]: ಈ ಶತಮಾನದ ಅತ್ಯಂತ ಸುದೀರ್ಘ ಖಗ್ರಾಸ ಚಂದ್ರ ಗ್ರಹಣಕ್ಕೆ ಇಡೀ ವಿಶ್ವವೇ ಇಂದು ಸಾಕ್ಷಿಯಾಗಲಿದೆ. ಭಾರತದ ಬಹುತೇಕ ಕಡೆ ಈ ಗ್ರಹಣ ಗೋಚರಿಸಲಿದೆ. 103 ನಿಮಿಷ ಹುಣ್ಣಿಮೆಯ ಬೆಳ್ಳಗಿನ ಚಂದಿರ ರಕ್ತ ಚಂದಿರನಾಗಿ ಬದಲಾಗಲಿದ್ದಾನೆ. ಈ ವಿದ್ಯಮಾನವನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.

ಏನಿದು ಬ್ಲಡ್ ಮೂನ್?

ಇದೊಂದು ನೆರಳು ಬೆಳಕಿನ ಆಟ. ಗ್ರಹಣದ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ನೇರವಾಗಿ ಬೀಳದೇ ಚದುರಿದಂತೆ ಬೀಳುತ್ತದೆ. ಹೀಗಾಗಿ ಚಂದ್ರನ ಮೇಲೆ ಬಿದ್ದ ಅಲ್ಪಸ್ವಲ್ಪ ಬೆಳಕು ಪರೋಕ್ಷವಾಗಿ ಭೂಮಿಗೆ ಪ್ರತಿಫಲನಗೊಳ್ಳುತ್ತದೆ. ಭೂಮಿಯ ವಾತಾವರಣದಿಂದ ಚಂದ್ರ ಕೆಂಪು ಬಣ್ಣಕ್ಕೆ ತಿರುಗಿದಂತೆ ಗೋಚರಿಸಲಿದೆ. ಇದು ಬ್ಲಡ್ ಮೂನ್ ಸೃಷ್ಟಿಗೆ ಕಾರಣವಾಗುತ್ತದೆ. ಸಾಮಾನ್ಯ ಚಂದ್ರ ಗ್ರಹಣದ ವೇಳೆ ಕೆಲ ಸಮಯ ಚಂದ್ರ ಪೂರ್ಣವಾಗಿ ಮರೆಯಾಗುತ್ತಾನೆ. ಬ್ಲಡ್ ಮೂನ್ ವೇಳೆ ಕೆಂಪಗೆ ಕಾಣಿಸುತ್ತಾನೆ.

ಈ ಬಾರಿ ಏಕೆ ವಿಶೇಷ?

ಈ ಬಾರಿಯ ಚಂದ್ರ ಗ್ರಹಣದಲ್ಲಿ ವಿಶೇಷತೆ ಇದೆ. ಜು.27ರಂದು ಚಂದ್ರ ಭೂಮಿಯಿಂದ ಅತ್ಯಂತ ಹೆಚ್ಚು ದೂರಕ್ಕೆ ಸರಿಯಲಿದ್ದಾನೆ. ಹೀಗಾಗಿ ಚಂದ್ರ ರಾತ್ರಿಯ ವೇಳೆ ಚಿಕ್ಕದಾಗಿ ಗೋಚರಿಸುತ್ತದೆ. ಭೂಮಿ ಚಂದ್ರನ ಮೇಲೆ ದೊಡ್ಡಗಾತ್ರದ ನೆರಳನ್ನು ಬೀರುತ್ತದೆ. ಭೂಮಿಯ ನೆರಳಿನ ಕೇಂದ್ರ ಬಿಂದುವಿನ ಮೂಲಕ ಚಂದ್ರ ಹಾದು ಹೋಗಲಿದ್ದಾನೆ. ಜೊತೆಗೆ ಚಂದ್ರ ಭೂಮಿಯನ್ನು ಹಾದು ಹೋಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಅತೀ ಸುದೀರ್ಘ ಸಮಯ ಗ್ರಹಣ ಸಂಭವಿಸಲಿದೆ. ಇದು 2018ರಲ್ಲಿ ಸಂಭವಿಸುತ್ತಿರುವ 2ನೇ ಮತ್ತು ಕೊನೆಯ ಚಂದ್ರಗ್ರಹಣ.
ಸುಮಾರು 1.43 ಗಂಟೆ ಚಂದ್ರ ಭೂಮಿಯ ನೆರಳಿನಲ್ಲಿ ಮರೆ ಆಗಲಿದ್ದಾನೆ. ಹೀಗಾಗಿ ಈ ಬಾರಿ ಚಂದ್ರ ಗ್ರಹಣ 21ನೇ ಶತಮಾನದ ಅತಿ ಸುದೀರ್ಘ ಗ್ರಹಣ ಎನಿಸಿದೆ. ಮತ್ತೊಮ್ಮೆ 1.43 ಗಂಟೆಯ ಚಂದ್ರ ಗ್ರಹಣ 104 ವರ್ಷಗಳ ಬಳಿಕ ಅಂದರೆ 2123ರಲ್ಲಿ ಸಂಭವಿಸಲಿದೆ.

ಎಷ್ಟು ಹೊತ್ತಿಗೆ ಗ್ರಹಣ?

ಭಾರತದಲ್ಲಿ ಚಂದ್ರ ಗ್ರಹಣ ಶುಕ್ರವಾರ ರಾತ್ರಿ 11.44ಕ್ಕೆ ಆರಂಭವಾಗಲಿದ್ದು, 3.49ರ ವರೆಗೂ ಗೋಚರಿಸಲಿದೆ. 1 ಗಂಟೆಗೆ ಬ್ಲಡ್ ಮೂನ್ ಆರಂಭವಾಗಲಿದ್ದು, 2 ಗಂಟೆ 43 ನಿಮಿಷದವರೆಗೆ ಚಂದ್ರ ಕೆಂಪಗೆ ಕಾಣಿಸುತ್ತಾನೆ. 103 ನಿಮಿಷಗಳ ಕಾಲ ಈ ವಿದ್ಯಮಾನ ಸಂಭವಿಸಲಿದೆ. ಭಾರತವೂ ಸೇರಿದಂತೆ ಏಷ್ಯಾದ ಬಹುತೇಕ ಭಾಗ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್, ಮತ್ತು ದಕ್ಷಿಣ ಅಮೆರಿಕದಲ್ಲಿ ಬ್ಲಡ್ ಮೂನ್ ಗೋಚರಿಸಲಿದೆ. 

ಚಂದ್ರ ಗ್ರಹಣ ಹೇಗಾಗುತ್ತದೆ?

ಸೌರ ಮಂಡಲ ವ್ಯವಸ್ಥೆಯಲ್ಲಿ ಭೂಮಿ ಸೂರ್ಯನ ಸುತ್ತ ಹಾಗೂ ಚಂದ್ರ ಭೂಮಿಯ ಸುತ್ತ ತನ್ನದೇ ಕಕ್ಷೆಯಲ್ಲಿ ಸುತ್ತುತ್ತಿರುತ್ತವೆ. ಚಂದ್ರ, ಭೂಮಿ ಮತ್ತು ಸೂರ್ಯ ನೇರ ರೇಖೆಯಲ್ಲಿ ಬಂದಾಗ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸೂರ್ಯನ ಬೆಳಕು ಭೂಮಿಯ ಮೇಲೆ ಪ್ರಕಾಶಮಾನವಾಗಿ ಬೀಳುತ್ತದೆ ಮತ್ತು ಚಂದ್ರ ಭೂಮಿಯ ಹಿಂಭಾಗದಲ್ಲಿ ಇರುವುದರಿಂದ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಅದೇ ರೀತಿ ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಬಂದಾಗ ಸಂಭವಿಸುವುದೇ ಸೂರ್ಯ ಗ್ರಹಣ. ಚಂದ್ರ ಗ್ರಹಣದಲ್ಲಿ ಎರಡು ವಿಧಗಳಿವೆ. ಭಾಗಶಃ ಚಂದ್ರ ಗ್ರಹಣ ಮತ್ತು ಪೂರ್ಣ ಚಂದ್ರ ಗ್ರಹಣ. 

ದುಪ್ಪಟ್ಟು ದೊಡ್ಡದಾಗಿ ಕಾಣಿಸಲಿದೆ ಮಂಗಳ: 

ಜು.27ರಂದು 15 ವರ್ಷಗಳ ನಂತರ ಮಂಗಳ ಗ್ರಹವು ಭೂಮಿಯ ಅತ್ಯಂತ ಸನಿಹಕ್ಕೆ ಬರಲಿದೆ. ಜೊತೆಗೆ, ಸೂರ್ಯ ಹಾಗೂ ಮಂಗಳ ಗ್ರಹವು ಭೂಮಿಯ ಎರಡು ವಿರುದ್ಧ ದಿಕ್ಕಿನಲ್ಲಿ ನೇರವಾಗಿ ಇರಲಿವೆ. ಹೀಗಾಗಿ ಪ್ರತಿದಿನ ಕಾಣಿಸುವುದಕ್ಕಿಂತ ಮಂಗಳ ಗ್ರಹವು ಶುಕ್ರವಾರ ರಾತ್ರಿ ದುಪ್ಪಟ್ಟು ಗಾತ್ರದಲ್ಲಿ ಕಾಣಿಸಲಿದ್ದು, ಹೆಚ್ಚು ಪ್ರಕಾಶಮಾನವಾಗಿಯೂ ಗೋಚರಿಸಲಿದೆ. ಹೀಗಾಗಿ ರಕ್ತ ಚಂದಿರನ ಜೊತೆಗೆ ಕೆಂಪು ಗ್ರಹ ಮಂಗಳನನ್ನೂ ಬರಿಗಣ್ಣಿನಲ್ಲೇ ನೋಡಿ ಆನಂದಿಸಿ.

ಒಂದಷ್ಟು ತಪ್ಪು ಕಲ್ಪನೆಗಳು:

ಚಂದ್ರಗ್ರಹಣ ಮಾನವನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಭೀತಾಗಿದ್ದರೂ, ಜನರು ಕೆಲ ಮೂಢನಂಬಿಕೆಗಳನ್ನು ಬಿಟ್ಟಿಲ್ಲ. ಅವುಗಳೆಂದರೆ..
* ಚಂದ್ರ ಗ್ರಹಣದ ವೇಳೆ ಆಹಾರ ಸೇವಿಸಬಾರದು, ಅಡುಗೆ ಮಾಡಬಾರದು, ನೀರು ಕುಡಿಯಬಾರದು. ಇದರಿಂದ ಕೆಡುಕಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ.

* ಗ್ರಹಣ ವೇಳೆ ಸೂರ್ಯ ಮತ್ತು ಚಂದ್ರನ ಮಧ್ಯೆ ಜಗಳ ನಡೆಯುತ್ತದೆ. ಹೀಗಾಗಿ ಜನರು ದೇವರನ್ನು ಪ್ರಾರ್ಥಿಸಬೇಕು ಎಂಬ ತಪ್ಪು ಗ್ರಹಿಕೆ ದಕ್ಷಿಣ ಆಫ್ರಿಕಾದಲ್ಲಿದೆ.

* ಚಂದ್ರ ಗ್ರಹಣದ ವೇಳೆ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು 10 ಪಟ್ಟು ಹೆಚ್ಚಾಗುತ್ತದೆ ಎಂಬ ಅಪನಂಬಿಕೆ ಟಿಬೆಟ್ ಜನರಲ್ಲಿದೆ.

* ಗ್ರಹಣ ವೇಳೆ ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರಬಾರದು, ಚಾಕು ಮತ್ತಿತರ ಹರಿತ ವಸ್ತುಗಳನ್ನು ಬಳಕೆ ಮಾಡಬಾರದು ಎಂಬ ತಪ್ಪು ಕಲ್ಪನೆ.

* ಚಂದ್ರ ಗ್ರಹಣ ಮುಗಿದ ಬಳಿಕ ಸ್ನಾನ ಮಾಡುವುದರಿಂದ ಪಾಪಗಳೆಲ್ಲವೂ ತೊಳೆದು ಹೋಗುತ್ತವೆ ಎಂಬ ಹುಸಿ ನಂಬಿಕೆಯೂ ಇದೆ.

ಬರಿಗಣ್ಣಿನಿಂದ ನೋಡಬಹುದೇ?

ಚಂದ್ರ ಗ್ರಹಣದ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಸೂರ್ಯ ಗ್ರಹಣದಂತೆ ಚಂದ್ರ ಗ್ರಹಣವನ್ನೂ ಬರಿಗಣ್ಣಿನಿಂದ ನೋಡಬಾರದು ಎಂಬ ಭಾವನೆ ಅನೇಕರಲ್ಲಿ ಇದೆ. ಆದರೆ, ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದ ನೋಡಿದರೆ ಯಾವುದೇ ಅಪಾಯ ಇಲ್ಲ. ಚಂದ್ರ ಗ್ರಹಣ ನೋಡಲು ಯಾವುದೇ ವಿಶೇಷ ಕನ್ನಡಕ ಬೇಡ. 

* ಜೀವರಾಜ್ ಭಟ್, ಕನ್ನಡಪ್ರಭ

loader