ಬೆಂಗಳೂರು[ಮಾ.06]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲೆಡೆ ಚುನಾವಣಾ ಕಣ ರಂಗೇರಿದೆ. ಪಕ್ಷಗಳು ಭರ್ಜರಿಯಾಗೇ ಪ್ರಚಾರ ಆರಂಭಿಸಿವೆ,. ಹೀಗಿರುವಾಗ ನಮ್ಮ ರಾಜಕಾರಣಿಗಳು ಈ ಚುನಾವಣೆಯ ಬಗ್ಗೆ ಏನಂತಾರೆ? ಹೀಗಿದೆ ನೋಡಿ 'ಪೊಲಿಟಿಕಲ್' ಮಾತು

ಕಾಂಗ್ರೆಸ್ ಪಕ್ಷದ ಸಂಸದ ವೀರಪ್ಪ ಮೊಯ್ಲಿ ಚುನಾವಣೆಯ ಬಗ್ಗೆ ಹೀಗಂದಿದ್ದಾರೆ

ಚುನಾವಣೆಯಲ್ಲಿ ಸಾಹಸಕ್ಕೆ ಕೈ ಹಾಕಬಹುದು, ಆದರೆ ದುಸ್ಸಾಹಸಕ್ಕಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ದುಸ್ಸಾಹಸಕ್ಕೆ ಮುಂದಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಂದು ಬಾರಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿದೆ. 1996ರಲ್ಲಿ ಆರ್.ಎಲ್.ಜಾಲಪ್ಪ ಜನತಾದಳದಿಂದ ಜಯ ಗಳಿಸಿದ್ದರು. ಅದರ ನಂತರ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. 

-ವೀರಪ್ಪ ಮೊಯ್ಲಿ ಸಂಸದ

ಜೆಡಿಎಸ್ ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲ್ಲ. ಅದು ಅವರ ಪಕ್ಷದ ವಿಚಾರ

ಸುಮಲತಾ ಅಂಬರೀಷ್‌ಗೆ ಟಿಕೆಟ್ ನೀಡುವ ವಿಚಾರ ನನಗೆ ಗೊತ್ತಿಲ್ಲ. ಆಕಸ್ಮಾತ್ ಟಿಕೆಟ್ ನೀಡಿದರೆ ಎಲ್ಲರೂ ಸಹಕರಿಸಬೇಕಾಗುತ್ತದೆ. ಜೆಡಿಎಸ್ ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲ್ಲ. ಅದು ಅವರ ಪಕ್ಷದ ವಿಚಾರ. ಕಾಂಗ್ರೆಸ್ ಪಕ್ಷದ ಬಗ್ಗೆ ಕೇಳಿದರೆ ಮಾತನಾಡಬಲ್ಲೆ. ಇನ್ನು ಚಿಂಚೋಳಿ ಶಾಸಕ ರಮೇಶ ಜಾಧವ್ ರಾಜಿನಾಮೆ ನೀಡಬಾರದಿತ್ತು. ಪಕ್ಷ ಅವರನ್ನು ಪ್ರೋತ್ಸಾಹಿಸಿ ಬೆಳೆಸಿತ್ತು.

-ಆರ್.ವಿ. ದೇಶಪಾಂಡೆ, ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ

ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಬಿಜೆಪಿ ನಾಯಕ ಪ್ರತಾಪ್ ಸಿಂಹ ಚುನಾವಣೆ ಬಗ್ಗೆ ಹೇಳಿದ್ದು ಹೀಗೆ

ನನ್ನ ಮಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಲ್ಲ, ಸಾರ್ವಜನಿಕರ ಭವಿಷ್ಯಕ್ಕೆ ಬೆಲೆ ಕೊಡು ತ್ತೇನೆ. ಮಕ್ಕಳು, ಮರಿಮಕ್ಕಳ ಭವಿಷ್ಯಕ್ಕೆ ಬೆಲೆ ಕೊಡುವ ರಾಜಕಾರಣಿ ನಾನಲ್ಲ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನನ್ನ ಎದುರಾಳಿ ಯಾರು ಎಂಬುದನ್ನು ನೋಡುವುದಿಲ್ಲ. ನಾನು ನಾಲ್ಕೂವರೆ ವರ್ಷ ಮಾಡಿದ ಅಭಿವೃದ್ಧಿ ಕೆಲಸವನ್ನು ಜನರು ನೋಡಿದ್ದಾರೆ.

-ಪ್ರತಾಪ್ ಸಿಂಹ ಮೈಸೂರು ಸಂಸದ