ಬಿಜೆಪಿಯಿಂದ ಇವರಿಗೆಲ್ಲಾ ಲೋಕಸಭಾ ಟಿಕೆಟ್ ಕನ್ಫರ್ಮ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 10:24 AM IST
Loksabha Election All BJP MPs Again Contest
Highlights

ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಿಜೆಪಿಯಿಂದ ಈ ಎಲ್ಲರೂ ಕೂಡ ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿದೆ. 

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಸದ್ದಿಲ್ಲದೆ ಸಿದ್ಧತೆ ಆರಂಭಗೊಂಡಿದ್ದು, ಬಹುತೇಕ ರಾಜ್ಯದ ಎಲ್ಲ ಹಾಲಿ ಸಂಸದರನ್ನೂ ಮತ್ತೆ ಸ್ಪರ್ಧೆಗಿಳಿಸುವ ಉದ್ದೇಶವನ್ನು ಪಕ್ಷದ ಹೈಕಮಾಂಡ್ ಹೊಂದಿದೆ ಎನ್ನಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಕೈಬಿಟ್ಟು ಹೊಸಬರನ್ನು ಕಣಕ್ಕಿಳಿಸಲಾಗುವುದು ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದು, ಇದನ್ನು ಪಕ್ಷದ ಉನ್ನತ ಮೂಲಗಳು ಬಲವಾಗಿ ನಿರಾಕರಿಸಿವೆ. 

ರಾಜ್ಯದಲ್ಲಿ ಆಡಳಿತಾರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ನಾವು ಹಾಲಿ ಸಂಸದರನ್ನು ಕೈಬಿಟ್ಟು ಹೊಸ ಪ್ರಯೋಗಕ್ಕೆ ಮುಂದಾದರೆ ಹಿನ್ನಡೆ ಆಗಬಹುದು ಎಂಬ ಆತಂಕ ಪಕ್ಷದ ವರಿಷ್ಠರಲ್ಲಿದೆ. ಈ ಕಾರಣಕ್ಕಾಗಿಯೇ ಬಹುತೇಕ ಈಗಿರುವ ಎಲ್ಲ ಸಂಸದರಿಗೂ ಟಿಕೆಟ್ ನೀಡುವುದೇ ಸೂಕ್ತ ಎಂಬ ನಿಲುವಿಗೆ ವರಿಷ್ಠರು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಮೂರ್ನಾಲ್ಕು ಕ್ಷೇತ್ರಗಳಲ್ಲಿ ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆ ವೇಳೆ ವರ್ಚಸ್ಸು ಕಡವೆುಯಾಗಿದೆ ಎಂಬ ಮಾಹಿತಿ ಲಭಿಸಿತ್ತು. 

ಆದರೆ, ಅಲ್ಲಿ ಅವರಿಗಿಂತ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಷ್ಟ. ಮೇಲಾಗಿ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ಸಾಧನೆಯನ್ನು ಮುಂದಿಟ್ಟುಕೊಂಡು ಎದುರಿಸುತ್ತಿರುವುದರಿಂದ ಅಭ್ಯರ್ಥಿಗಳು ಈಗಿರುವ ಸಂಸದರೇ ಆದರೂ ಅಡ್ಡಿಯಿಲ್ಲ ಎಂಬ ಅಭಿಪ್ರಾಯವೂ ಪಕ್ಷದಲ್ಲಿ ಕೇಳಿಬಂದಿದೆ. 

ಆದರೆ, ಬಿಜೆಪಿ ಕಳೆದ ಬಾರಿ ಸೋಲು ಕಂಡಿರುವ ಲೋಕಸಭಾ ಕ್ಷೇತ್ರಗಳಲ್ಲಿ  ಹೊಸಬರನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಅಂಥ ಕ್ಷೇತ್ರಗಳಲ್ಲಿ  ಸೆಲೆಬ್ರಿಟಿಗಳನ್ನು ಅಥವಾ ವಿವಿಧ ಕ್ಷೇತ್ರಗಳ ಸಾಧಕರನ್ನು ಮನವೊಲಿಸಿ ಅಭ್ಯರ್ಥಿಗಳನ್ನಾಗಿಸುವ ಬಗ್ಗೆ ಪರಿಶೀಲನೆ ನಡೆದಿದೆ ಎನ್ನಲಾಗಿದೆ. 

ಕಳೆದ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 17 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಈ ಪೈಕಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಬಿ.ಎಸ್.ಯಡಿಯೂರಪ್ಪ ಮತ್ತು ಉಪಾಧ್ಯಕ್ಷರೂ ಆಗಿರುವ ಬಿ.ಶ್ರೀರಾಮುಲು ಅವರಿಬ್ಬರೂ ವಿಧಾನಸಭೆ ಪ್ರವೇಶಿಸಿರುವುದರಿಂದ 15 ಸಂಸದರು ಉಳಿದಂತಾಗಿದೆ. ಯಡಿಯೂರಪ್ಪ ರಾಜೀನಾಮೆ ನೀಡಿರುವ ಶಿವಮೊಗ್ಗ ಮತ್ತು ಶ್ರೀರಾಮುಲು ರಾಜೀನಾಮೆ ನೀಡಿರುವ ಬಳ್ಳಾರಿಯಿಂದ ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಶಿವಮೊಗ್ಗದಿಂದ ಹಿಂದೆ ಲೋಕಸಭಾ ಸದಸ್ಯರಾಗಿದ್ದ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಬಳ್ಳಾರಿಯಿಂದ ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಅಲ್ಲಿ ಶ್ರೀರಾಮುಲು ಸೂಚಿಸಿದವರಿಗೇ ಟಿಕೆಟ್ ನೀಡಲಾಗುತ್ತದೆ. ಬೆಂಗಳೂರು ಉತ್ತರ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕ್ಷೇತ್ರ ಬದಲಿಸಿ ಉಡುಪಿ- ಚಿಕ್ಕಮಗಳೂರಿಗೆ ತೆರಳುತ್ತಾರೆ ಎಂಬ ವದಂತಿಯೂ ಹಬ್ಬಿತ್ತು. 

ಆದರೆ, ಅದನ್ನು ಸ್ವತಃ ಸದಾನಂದಗೌಡರೇ ಅಲ್ಲಗಳೆದಿದ್ದಾರೆ. ಈ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಾಸರಹಳ್ಳಿ ಕ್ಷೇತ್ರದಿಂದ ಸೋಲುಂಡಿರುವ ಎಸ್. ಮುನಿರಾಜುರನ್ನು ಕಣಕ್ಕಿಳಿಸಬೇಕು ಎಂಬ ಉದ್ದೇಶದಿಂದ ಬಿಜೆಪಿಯ ಕೆಲವು ಮುಖಂಡರೇ ಇಂಥದೊಂದು ವದಂತಿ ಹಬ್ಬಿಸಿದ್ದಾರೆ ಎಂಬುದೂ ಈಗ ಹೊರಬಿದ್ದಿದೆ. ಇನ್ನು ಶೋಭಾ ಕರಂದ್ಲಾಜೆ ಸ್ಪರ್ಧಿಸುವುದಿಲ್ಲ ಎಂಬ ವದಂತಿಗಳನ್ನು ಯಡಿಯೂರಪ್ಪ ಅವರೇ ತಳ್ಳಿ ಹಾಕಿದ್ದಾರೆ. 

loader