ನವದೆಹಲಿ : ಕಳೆದ ಬಾರಿ ಮೋದಿ ಅಲೆ ಭರ್ಜರಿಯಾಗಿ ಎದ್ದಿದ್ದ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈ ಸಲ ಕೂಡ ತ್ರಿಕೋನ ಸ್ಪರ್ಧೆಯ ಸಾಧ್ಯತೆ ನಿಚ್ಚಳವಾಗಿದೆ. ಎಂದಿನಂತೆ ಬಿಜೆಪಿ ಏಕಾಂಗಿ ಹೋರಾಟ ನಡೆಸಲಿದೆ. ಆದರೆ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (ಆಪ್) ನಡುವಿನ ಮೈತ್ರಿ ಮಾತುಕತೆ ಮುರಿದುಬಿದ್ದಿದ್ದು, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುವ ಮುನ್ಸೂಚನೆ ಲಭಿಸಿದೆ. ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಆಮ್ ಆದ್ಮಿ ಪಕ್ಷ, 7 ಲೋಕಸಭಾ ಕ್ಷೇತ್ರಗಳ ಪೈಕಿ ೬ರ ಅಭ್ಯರ್ಥಿಗಳನ್ನು ಪ್ರಕಟಿಸಿ ತಯಾರಿ ಆರಂಭಿಸಲು ನಿರ್ಧರಿಸಿದೆ.

ಒಟ್ಟಾರೆ ದಿಲ್ಲಿ ಮಟ್ಟಿಗೆ ಹೇಳಬೇಕು ಎಂದರೆ ಮೋದಿ ಅವರನ್ನು ಸೋಲಿಸಲು ‘ಮಹಾಗಠಬಂಧನ’ ಮಾಡಿಕೊಳ್ಳ ಬೇಕು ಎಂಬ ಪ್ರತಿಪಕ್ಷಗಳು ನಡೆಸಿದ ರ‌್ಯಾಲಿಗಳ ಆಶಯ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು, ಅಖಾಡದಲ್ಲಿ ಅದು ಕಾರ್ಯರೂಪಕ್ಕೆ ಬರುವುದು ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ.

ರಾಜ್ಯ ಸಮರ: ಮಹಾಗಠಬಂಧನಕ್ಕೆ ಮೋದಿ-ನಿತೀಶ್ ಸಡ್ಡು

ಆಪ್: ರಾಷ್ಟ್ರ ರಾಜಧಾನಿಯ ರಾಜ್ಯ ಸರ್ಕಾರವು ಆಪ್ ವಶದಲ್ಲಿದ್ದರೂ, ಕೇಂದ್ರ ರಾಜಕೀಯದಲ್ಲಿ ಪ್ರಭಾವ ಬೀರಲು ಆಪ್ ಈವರೆಗೆ ಅಷ್ಟಾಗಿ ಯಶ ಕಂಡಿಲ್ಲ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ ಆಪ್‌ನ ಒಬ್ಬನೇ ಒಬ್ಬ ಅಭ್ಯರ್ಥಿ ಕೂಡ ಗೆದ್ದಿರಲಿಲ್ಲ. ಆಪ್ ನೇತಾರ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತವರೂರಿನಲ್ಲಿಯೇ ಪಕ್ಷವನ್ನು ಲೋಕಸಭೆಗೆ ಗೆಲ್ಲಿಸಿಕೊಡಲು 5 ವರ್ಷದ ಹಿಂದೆ ವಿಫಲರಾಗಿದ್ದರು. ನರೇಂದ್ರ ಮೋದಿ ಅವರ ಅಲೆಯಲ್ಲಿ ಆಪ್ ಧೂಳೀಪಟವಾಗಿತ್ತು.

ಇದರಿಂದ ಪಾಠ ಕಲಿತಿದ್ದ ಕೇಜ್ರಿವಾಲ್ ಅವರು ಈ ಸಲದ ಚುನಾವಣೆಯಲ್ಲಿ, ತಾವು ನಖಶಿಖಾಂತ ವಿರೋಧಿಸುವ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಹೊರಟಿದ್ದರು. ಆದರೆ ಅದು ಸಾಧ್ಯವಾಗದೇ ಕೈಸುಟ್ಟುಕೊಂಡಿದ್ದಾರೆ. ಯಾವ ಶೀಲಾ ದೀಕ್ಷಿತ್ ಅವರನ್ನು ಜೈಲಿಗೆ ಅಟ್ಟುವುದಾಗಿ ಹೇಳಿದ್ದ ಕೇಜ್ರಿವಾಲ್ ಅವರು ಇತ್ತೀಚೆಗೆ ‘ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ಮೈತ್ರಿ ಮಾಡಿಕೊಳ್ಳೋಣ’ ಶೀಲಾ ಹಾಗೂ ರಾಹುಲ್ ಅವರಿಗೆ ದುಂಬಾಲು ಬಿದ್ದಿದ್ದರು. 

ಆದರೆ ಕೇಜ್ರಿವಾಲ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೆ ಭವಿಷತ್ ಕಾಲದಲ್ಲಿ ಕಾಂಗ್ರೆಸ್‌ಗೆ ಭಾರಿ ಹಾನಿಯಾಗಬಹುದು  ಎಂಬುದು ರಾಹುಲ್ ಗಾಂಧಿ ಅವರ ಆಪ್ತ ವಲಯದ ಅನಿಸಿಕೆ. ಅದಕ್ಕೆಂದೇ ರಾಹುಲ್ ಹಾಗೂ ಶೀಲಾ ದೀಕ್ಷಿತ್ ನಡುವೆ ನಡೆದ ಸಭೆಯ ಬಳಿಕ ‘ಆಪ್ ಜತೆ ಮೈತ್ರಿ’ ಸಾಧ್ಯವಿಲ್ಲ ಎಂಬ ಘೋಷಣೆ ಹೊರಬಿತ್ತು ಎಂದು ಹೇಳಲಾಗಿದೆ. 

ರಾಜ್ಯ ಸಮರ: ಯುಪಿಯಲ್ಲಿ ಈ ಸಲವೂ ಬಿಜೆಪಿ ಮ್ಯಾಜಿಕ್ ಮಾಡುತ್ತಾ?

ಹೀಗಾಗಿ ರಾಘವ್ ಚಡ್ಢಾ ಹಾಗೂ ಆತಿಷಿ ಮಲ್ರೇಣಾ ಸೇರಿದಂತೆ  ಅಭ್ಯರ್ಥಿಗಳ ಪಟ್ಟಿಯನ್ನು ಕೇಜ್ರಿವಾಲ್ ಪ್ರಕಟಿಸಿದ್ದು, 1 ಸ್ಥಾನವನ್ನು ಮಾತ್ರ ಬಾಕಿ ಇರಿಸಿಕೊಂಡಿದ್ದಾರೆ. ‘ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ’ ಎಂದು ಆರೋಪಿಸಿ ಪಕ್ಷಕ್ಕೆ ಮತ ಕೇಳಲು ಕೇಜ್ರಿ ನಿರ್ಧರಿಸಿದ್ದಾರೆ. ಇದೇ ವೇಳೆ ‘ದಿಲ್ಲಿ ಪ್ರತ್ಯೇಕ ರಾಜ್ಯ ಆಗಬೇಕು. ಕೇಂದ್ರಾಡಳಿತದಲ್ಲಿ ಇರಬಾರದು’ ಎಂಬುದನ್ನೂ ಪ್ರಮುಖ ಚುನಾವಣಾ ವಿಷಯ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಆದರೆ ಕಳೆದ ಬಾರಿ ಸ್ಪರ್ಧಿಸಿದ್ದ ಆಶುತೋಷ್ ಹಾಗೂ ಆಶಿಷ್ ಖೇತಾನ್ ಅವರಂಥ ಪ್ರಮುಖರು ಆಪ್ ತೊರೆದಿದ್ದು, ಅವರ ಅನುಪಸ್ಥಿತಿಯು ಪಕ್ಷವನ್ನು ಕಾಡಲಿದೆ.

ಕಾಂಗ್ರೆಸ್: ಇನ್ನು ಕಾಂಗ್ರೆಸ್ ಪಕ್ಷದ ಸ್ಥಿತಿ 2014 ಕ್ಕಿಂತ ಸುಧಾರಿಸಿದೆ ಎಂದೇನೂ ಹೇಳಲಾಗದು. 2014 ರಲ್ಲಿ ದಿಲ್ಲಿ ಕಾಂಗ್ರೆಸ್‌ಗೆ ಅಜಯ್ ಮಾಕನ್ ಅಧ್ಯಕ್ಷರಾಗಿದ್ದರು. ಆದರೆ ಇತ್ತೀಚೆಗೆ ಪುನಃ ವಯೋವೃದ್ಧ ನಾಯಕಿ, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಪಕ್ಷದ ಚುಕ್ಕಾಣಿ ನೀಡಲಾಗಿದೆ. 

ಆಪ್ ಜತೆಗಿನ ಮೈತ್ರಿ ಸಾಧ್ಯತೆ ಮುರಿದುಬಿದ್ದ ಬಳಿಕ ಕೆಲವು ಇತರ ಪಕ್ಷಗಳ ಜತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆಗೆ ಯತ್ನಿಸುತ್ತಿದೆ ಎಂಬ ಮಾಹಿತಿ ಇದೆ. ಆದರೆ ಎಷ್ಟರ ಮಟ್ಟಿಗೆ ಇದು ಯಶಸ್ವಿಯಾಗಲಿದೆ ಎಂದು ಹೇಳಲಾಗದು. ದಿಲ್ಲಿಯ ಲೋಕಸಭೆ ಹಾಗೂ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್‌ಗೆ ಈ ಸಲದ ಚುನಾವಣೆ ಸವಾಲಿನದಾಗಿದ್ದು, ರಾಹುಲ್ ಗಾಂಧಿ-ಶೀಲಾ ದೀಕ್ಷಿತ್ ಜೋಡಿಯು ಹೇಗೆ ಪಕ್ಷವನ್ನು ಮೇಲೆತ್ತಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಬಿಜೆಪಿ: ಇನ್ನು ಬಿಜೆಪಿ ಕಳೆದ ಸಲದಂತೆ ಎಲ್ಲ 7 ಸ್ಥಾನಗಳಲ್ಲೂ ಜಯಿಸುವ ವಿಶ್ವಾಸದಲ್ಲಿದೆ. ಆಪ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಜಾತ್ಯತೀತ ಮತಗಳು ವಿಭಜನೆ ಆಗುವ ಸಾಧ್ಯತೆ ಕಡಿಮೆ ಇರುತ್ತಿತ್ತು. ಆದರೆ ಈಗ ಎಲ್ಲ ಬಿಜೆಪಿ ಬಯಸಿದಂತೆಯೇ ಆಗಿದ್ದು, ಮಹಾಗಠಬಂಧನದ ಯತ್ನಗಳು ಭಗ್ನಗೊಂಡಿವೆ. ಹೀಗಾಗಿ ಪ್ರತಿಪಕ್ಷಗಳ ಮತ ವಿಭಜನೆಗೊಂಡು, ಸಾಂಪ್ರದಾಯಿಕ ಮತಗಳು ಬಿದ್ದರೆ ಜಯ ಕಟ್ಟಿಟ್ಟ ಬುತ್ತಿ ಎಂಬ ಲೆಕ್ಕಾ ಚಾರದಲ್ಲಿ ಬಿಜೆಪಿ ಇದೆ.

ಇನ್ನು ದಿಲ್ಲಿ ಜನರ ಮನಸ್ಥಿತಿ ‘ದಿಲ್ಲಿಗೆ ಕೇಜ್ರಿವಾಲ್’, ‘ಕೇಂದ್ರಕ್ಕೆ ಮೋದಿ’ ಎಂಬುದಾಗಿದೆ ಎಂದೂ ಕೆಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಬಿಜೆಪಿ ಕೂಡ ಇದನ್ನೇ ನೆಚ್ಚಿಕೊಂಡಿದೆ.