ಮಹಾಭಾರತ ಸಂಗ್ರಾಮ: ಉತ್ತರ ಪ್ರದೇಶ

ಲಕ್ನೋ[ಮಾ.06]: ಭಾರತದ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ಪಾತ್ರ ಹಿರಿದು. ಏಕೆಂದರೆ 543 ಒಟ್ಟು ಲೋಕಸಭಾ ಸ್ಥಾನಗಳಲ್ಲಿ ಉತ್ತರಪ್ರದೇಶವೊಂದೇ ೮೦ ಸ್ಥಾನಗಳನ್ನು ಹೊಂದಿದ್ದು, ವಿಜೇತರು ಯಾರು ಎಂಬುದನ್ನು ನಿರ್ಣಯಿಸುವಲ್ಲಿ ಈ ಬೃಹತ್ ರಾಜ್ಯ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೆಂದೇ 2019ರ ಲೋಕಸಭೆ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಯಾರ ಕೈ ಮೇಲಾಗಬಹುದು? ಈ ಹಿಂದಿನ ರೀತಿಯಲ್ಲಿ ಈಗ ಮೋದಿ ಅಲೆ ಇರುತ್ತಾ ಎಂಬ ಚರ್ಚೆ ಈಗ ಆರಂಭವಾಗಿದೆ

ಕಳೆದ ಲೋಕಸಭೆ ಚುನಾವಣೆಯಲ್ಲಿ (2014) ಬಿಜೆಪಿ ಪಾಲಿಗೆ ಉತ್ತರ ಪ್ರದೇಶವು ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನಿಸಿಕೊಂಡಿತು. ಒಟ್ಟು 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಇಲ್ಲಿ ಜಯಿಸಿದ್ದು 71 ಕ್ಷೇತ್ರಗಳಾದರೆ, ಅದರ ಮಿತ್ರಪಕ್ಷ ಅಪ್ನಾ ದಳ, ತಾನು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಹೀಗಾಗಿ ಎನ್‌ಡಿಎ ಮೈತ್ರಿಕೂಟ ಇಲ್ಲಿ 73 ಸ್ಥಾನಗಳಲ್ಲಿ ಗೆದ್ದಂತಾಗಿತ್ತು. ಆದರೆ ಪ್ರಬಲ ಸಮಾಜವಾದಿ ಪಕ್ಷ ಕೇವಲ 5 ಹಾಗೂ ಕಾಂಗ್ರೆಸ್ ಪಕ್ಷ 2 ಕ್ಷೇತ್ರಗಳಲ್ಲಿ ಗೆದ್ದು, ಭಾರಿ ಹಿನ್ನಡೆ ಅನುಭವಿಸಿದ್ದವು. ಇದಕ್ಕಿಂತ ಹೆಚ್ಚಾಗಿ, ನರೇಂದ್ರ ಮೋದಿ ಅಲೆಯಲ್ಲಿ ಬಿಎಸ್‌ಪಿ ಕೊಚ್ಚಿ ಹೋಗಿ ಶೂನ್ಯ ಸಂಪಾದನೆ ಮಾಡಿತ್ತು.

ಉತ್ತರಪ್ರದೇಶದ 2014ರ ಲೋಕಸಭಾ ಚುನಾವಣಾ ವೈಶಿಷ್ಟ್ಯವೆಂದರೆ ಗುಜರಾತ್‌ನ ವಡೋದರಾ ಜತೆಗೆ ಮೋದಿ ಅವರು, ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರ ವಾರಾಣಸಿ ಯಲ್ಲಿ ಕಣಕ್ಕಿಳಿದಿದ್ದರು. ಬಿಜೆಪಿಗೆ ರಾಜ್ಯದಲ್ಲಿ ಹೆಚ್ಚು ಸ್ಥಾನ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದಲೇ ಮೋದಿ ಅವರು ಕಾಶಿಯಿಂದ ಅಖಾಡಕ್ಕಿಳಿದಿದ್ದರು. ಇದರ ಪರಿಣಾಮ ಯಾವ ಮಟ್ಟಿಗೆ ರಾಜ್ಯದ ಮೇಲಾಯಿತೆಂದರೆ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್ಪಿ ಹಾಗೂ ಇನ್ನಿತರ ಸಣ್ಣಪುಟ್ಟ ಪಕ್ಷಗಳು ಹೇಳ ಹೆಸರಿಲ್ಲದಂತೆ ಪರಾಭವಗೊಂಡವು

ಚಿತ್ರಣ ಬದಲು:

ಆದರೆ ಈಗ ರಾಜ್ಯದ ಚಿತ್ರಣ ಬದಲಾಗಿದೆ. ಬಿಜೆಪಿಯನ್ನು ಸೋಲಿಸಲು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪರಸ್ಪರ ವೈರಿ ಪಕ್ಷಗಳಾದ ಎಸ್‌ಪಿ ಹಾಗೂ ಬಿಎಸ್‌ಪಿ ಒಗ್ಗಟ್ಟಾಗಿ ವ್ಯೆಹ ಹೆಣೆದಿವೆ. ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಕೂಡ ಮಾಯಾವತಿ-ಅಖಿಲೇಶ್ ಯಾದವ್ ಅವರ ‘ಮಹಾಮೈತ್ರಿಕೂಟ’ದ ಜತೆ ಕೈಜೋಡಿಸಲು ತೀರ್ಮಾನಿಸಿದೆ

ಆದರೆ ಈ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿಲ್ಲ. ಇದು ಕೊಂಚ ಮಟ್ಟಿಗೆ ‘ಜಾತ್ಯತೀತ ಮತ’ಗಳು ಒಡೆದು ಬಿಜೆಪಿಗೆ ಅನುಕೂಲ ಕಲ್ಪಿಸಬಹುದು ಎನ್ನಲಾಗಿದೆ. ಆದಾಗ್ಯೂ ಪ್ರಿಯಾಂಕಾ ಗಾಂಧಿ ಅವರು ಮೊದಲ ಬಾರಿ ರಾಜಕೀಯ ಪ್ರವೇಶಿಸಿದ್ದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್. ಜತೆಗೆ ಪ್ರಿಯಾಂಕಾ ಅವರಿಗೆ ಪೂರ್ವ ಉತ್ತರಪ್ರದೇಶದ ಚುನಾವಣಾ ಹೊಣೆಗಾರಿಕೆ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪಶ್ಚಿಮ ಉತ್ತರಪ್ರದೇಶದ ಉಸ್ತುವಾರಿ ವಹಿಸಲಾಗಿದೆ. ಹೀಗಾಗಿ ೨೦೦೯ರಲ್ಲಿ ಗೆದ್ದಿದ್ದ 21 ಕ್ಷೇತ್ರಗಳಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ

ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಜಯಭೇರಿ ಬಾರಿಸಿದ್ದ ಬಿಜೆಪಿಗೆ ಈ ಲೋಕಸಭೆ ಚುನಾವಣೆ ಕಬ್ಬಿಣದ ಕಡಲೆ ಆಗುವುದರಲ್ಲಿ ಸಂಶಯವಿಲ್ಲ. ಪ್ರಧಾನಿ ಮೋದಿ ಅವರು ವಾರಾಣಸಿಯಿಂದಲೇ ಈ ಸಲವೂ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಬಿಎಸ್‌ಪಿ-ಎಸ್‌ಪಿ ಮಹಾಘಟಬಂಧನವು ಬಿಜೆಪಿಗೆ ಹೊಡೆತ ಕೊಡುವ ಸಾಧ್ಯತೆ ಇದೆ. ಈ ಹಿಂದಿನಂತೆ 73 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಲಿಕ್ಕಿಲ್ಲ’ ಎನ್ನಲಾ ಗಿದೆ. ಆದಾಗ್ಯೂ ಜಾತ್ಯತೀತ ಮತಗಳನ್ನು ವಿಭಜಿಸಿ ಗೆಲ್ಲುವ ಸನ್ನಾಹದಲ್ಲಿ ಬಿಜೆಪಿ ಇದೆ. ಜತೆಗೆ ನಮಾಮಿ ಗಂಗೆ ಸೇರಿದಂತೆ ಮೋದಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಹಾಗೂ ಇತ್ತೀಚಿನ ಸರ್ಜಿಕಲ್ ದಾಳಿಯ ಪ್ರಭಾವವು ಕೊನೇ ಕ್ಷಣದಲ್ಲಿ ಮ್ಯಾಜಿಕ್ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದೆ ಬಿಜೆಪಿ.

ಮತಗಳ ಲೆಕ್ಕಾಚಾರ

ಕಳೆದ ಲೋಕಸಭೆ ಚುನಾವಣೆ ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಶೇ.42.3 ಮತ ಗಳಿಸಿತ್ತು. ಎಸ್‌ಪಿ 22.20 ಹಾಗೂ ಮಾಯಾವತಿ ಅವರ ಬಿಎಸ್‌ಪಿ ಶೇ.19.60 ಮತ ಪಡೆದಿದ್ದವು. ಕಾಂಗ್ರೆಸ್ ಕೇವಲ ಶೇ.7.5ಕ್ಕೆ ಮತಗಳಿಗೆ ತೃಪ್ತಿಪಟ್ಟಿತ್ತು. ಆದರೆ ಈಗ ಮಹಾಘಟಬಂಧನದ ಪರಿಣಾಮ ಬಿಎಸ್‌ಪಿ-ಎಸ್‌ಪಿ ಮತಗಳು ಒಗ್ಗೂಡಲಿದ್ದು, ಇದು ಬಿಜೆಪಿಗೆ ಹಾನಿ ಉಂಟು ಮಾಡಬಹುದು. ಮಹಾಘಟಬಂಧ ನವು ಹೆಚ್ಚೂಕಡಿಮೆ ಬಿಜೆಪಿಯಷ್ಟೇ ಸರಿಸಮನಾಗಿ ಮತಗಳು ಹಾಗೂ ಸ್ಥಾನ ಗಳಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

ಪ್ರಮುಖ ಕ್ಷೇತ್ರಗಳು

1. ರಾಯ್‌ಬರೇಲಿ, 2.ಅಮೇಠಿ 3. ವಾರಾಣಸಿ, 4. ಸುಲ್ತಾನ್‌ಪುರ, 5. ಮಥುರಾ 6. ಲಖನೌ

ಪ್ರಮುಖ ಅಭ್ಯರ್ಥಿಗಳು

ನರೇಂದ್ರಮೋದಿ

ರಾಹುಲ್‌ಗಾಂಧಿ

ಹೇಮಮಾಲಿನಿ

ಸೋನಿಯಾಗಾಂಧಿ

ರಾಜ್‌ನಾಥ್‌ ಸಿಂಗ್

ಮುರಳಿ ಮನೋಹರ ಜೋಶಿ