ಬೆಂಗಳೂರು :  ಬಹುದಿನಗಳಿಂದ ಚರ್ಚೆಗೆ ಗ್ರಾಸವಾಗಿರುವ ಹಾಸನ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಉತ್ತರಾಧಿಕಾರಿಯಾಗಿ ಪ್ರಜ್ವಲ್‌ ರೇವಣ್ಣ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾದಂತಾಗಿದೆ.

ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ತಾಲೀಮು ಆರಂಭಿಸಲು ಜೆಡಿಎಸ್‌ ಸಿದ್ಧತೆ ನಡೆಸುತ್ತಿದ್ದು, ಹಾಸನ ಕ್ಷೇತ್ರದಿಂದ ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರನ್ನು ಕಣಕ್ಕಿಳಿಸುವ ಮುನ್ಸೂಚನೆಯನ್ನು ನೀಡಿದ್ದಾರೆ. ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಡುವ ಸುಳಿವು ನೀಡಿದ ದೇವೇಗೌಡ ಅವರು ತಮ್ಮ ರಾಜಕೀಯ ನಡೆಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ರಹಸ್ಯವಾಗಿಟ್ಟಿದ್ದಾರೆ.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್‌ ಅಧಿವೇಶನವು ಜ.8ಕ್ಕೆ ಮುಗಿಯಲಿದೆ. ಬಳಿಕ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಳ್ಳಲಾಗುವುದು. ಹಾಸನ ಕ್ಷೇತ್ರದಿಂದ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದು ಇನ್ನೂ ಅಂತಿಮ ಗೊಂಡಿಲ್ಲ. ಆದರೆ, ಪ್ರಜ್ವಲ್‌ ರೇವಣ್ಣ ಕಳೆದ 2-3 ವರ್ಷಗಳಿಂದ ಹಾಸನ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮ ಹಾಕುತ್ತಿದ್ದಾರೆ. ಹೀಗಾಗಿ ಆತನಿಗೆ ಬಿಟ್ಟು ಕೊಡುವ ಇಂಗಿತ ಇದೆ. ಪಕ್ಷದೊಳಗೆ ಚರ್ಚಿಸಬೇಕಿದೆ ಎಂದರು. ಈ ಮೂಲಕ ಹಲವು ದಿನಗಳಿಂದ ಪ್ರಜ್ವಲ್‌ ರೇವಣ್ಣ ಚುನಾವಣೆಗೆ ಧುಮುಕುವ ಕುರಿತು ಇದ್ದ ವದಂತಿ​ಗ​ಳಿಗೆ ಇತಿಶ್ರೀ ಹಾಡುವ ಪ್ರಯತ್ನವನ್ನು ದೇವೇಗೌಡ ಅವರು ಮಾಡಿದರು.

ಮುಂದಿನ ತಿಂಗಳು ಜ.3ರಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದಕ್ಕೆ ಸಹಮತ ವ್ಯಕ್ತಪಡಿಸಲಿದ್ದಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಸಭೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸುವ ಬಗ್ಗೆ ಒಮ್ಮತ ಅಭಿಪ್ರಾಯ ಮೂಡಿಬಂದಲ್ಲಿ ದೇವೇಗೌಡರ ಬದಲು ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಲಿದೆ.

ದೇವೇಗೌಡರ ಸ್ಪರ್ಧೆ ಎಲ್ಲಿ?

ಜೆಡಿಎಸ್‌ ಭದ್ರಕೋಟೆಯಾಗಿರುವ ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಬಿಟ್ಟುಕೊಟ್ಟರೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರ ಮುಂದಿನ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಲಿದೆ.

ಹಾಸನ ಬದಲಿಗೆ ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಈ ಬಗ್ಗೆ ದೇವೇಗೌಡ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಮಂಡ್ಯ ಜಿಲ್ಲೆಯಿಂದ ಮೂವರು ಸಚಿವರು ಇದ್ದಾರೆ. ಪಕ್ಷದ ಶಾಸಕರು ಇದ್ದಾರೆ. ಪಕ್ಷದ ಪ್ರಮುಖರು ಕುಳಿತು ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದಷ್ಟೇ ಹೇಳಿದರು.