ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಇದೀಗ ಕಟ್ಟಪ್ಪಣೆಯೊಂದನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿ  ಲೋಡ್ ಶೆಡ್ಡಿಂಗ್ ಭೀತಿ ಎದುರಾಗಿದ್ದು, ಜಲ ಹಾಗೂ ಸೌರವಿದ್ಯುತ್‌ ನೆರವಿನಿಂದ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಸೂಚಿಸಿದ್ದಾರೆ. 

ಬೆಂಗಳೂರು :  ಕೇಂದ್ರದಿಂದ ರಾಜ್ಯದ ಮೂರು ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಅಗತ್ಯವಿರುವಷ್ಟುಕಲ್ಲಿದ್ದಲು ಪೂರೈಕೆ ಆಗದಿರುವುದು ಹಾಗೂ ಕೇಂದ್ರ ಗ್ರಿಡ್‌ನಿಂದಲೂ ಸರಿಯಾಗಿ ರಾಜ್ಯಕ್ಕೆ ವಿದ್ಯುತ್‌ ಪೂರೈಕೆ ಆಗದಿರುವುದರಿಂದ ಮಳೆಗಾಲ ಮುಗಿಯುವ ಮುನ್ನವೇ ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ ಭೀತಿ ಆವರಿಸಿದೆ.

ಆದರೆ, ಲೋಡ್‌ ಶೆಡ್ಡಿಂಗ್‌ ಮಾಡದೇ ವಿದ್ಯುತ್‌ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಆದೇಶಿಸಿದ್ದು, ಜಲ ಹಾಗೂ ಸೌರವಿದ್ಯುತ್‌ ನೆರವಿನಿಂದ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಯಚೂರಿನ ಆರ್‌ಟಿಪಿಎಸ್‌ ಶಾಖೋತ್ಪನ್ನ ಘಟಕದಲ್ಲಿ 1,720 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದ್ದರೂ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್‌ ಉತ್ಪಾದನೆ 590 ಮೆ.ವ್ಯಾ.ಗೆ ಕುಸಿದಿದೆ. ಜತೆಗೆ 15 ದಿನಗಳಿಗೆ ಅಗತ್ಯವಾದ ಕಲ್ಲಿದ್ದಲು ಶೇಖರಣೆ ಇರಬೇಕಾದರೂ ಒಂದು ದಿನಕ್ಕೆ ಆಗುವಷ್ಟೂದಾಸ್ತಾನು ಇಲ್ಲ. ಆಯಾ ದಿನಕ್ಕೆ ಬರುವ ಕಲ್ಲಿದ್ದಲ್ಲನ್ನು ಮಾತ್ರವೇ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ. ಒಂದು ದಿನ ವ್ಯತ್ಯಯವಾದರೂ ಉಷ್ಣ ವಿದ್ಯುತ್‌ ಸ್ಥಾವರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ರಾಯಚೂರು ಆರ್‌ಟಿಪಿಎಸ್‌ ಶಾಖೋತ್ಪನ್ನ ಘಟಕದ ಎಂಟು ಘಟಕಗಳ ಪೈಕಿ ನಾಲ್ಕು ಮುಚ್ಚಲ್ಪಟ್ಟಿವೆ. ಉಳಿದಂತೆ ಬಳ್ಳಾರಿಯ ಕುಡುತಿನಿ ಬಳಿಯ ಬಿಟಿಪಿಎಸ್‌ನ ಮೂರು ಘಟಕಗಳಿಂದ 1,700 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯಾಗಬೇಕಿತ್ತು. ಆದರೆ, ಅಲ್ಲೂ ಕಲ್ಲಿದ್ದಲಿನ ತೀವ್ರ ಅಭಾವ ಕಾಡುತ್ತಿದೆ. ರಾಯಚೂರಿನ ಯರಮರಸ್‌ ಶಾಖೋತ್ಪನ್ನ ಘಟಕ 1,600 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಅಲ್ಲಿಯೂ ಅಗತ್ಯದ ಅರ್ಧದಷ್ಟುಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ನಿತ್ಯ 23 ಸಾವಿರ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಅಗತ್ಯವಿದ್ದರೂ, 14 ಸಾವಿರ ಮೆಟ್ರಿಕ್‌ ಟನ್‌ ಮಾತ್ರ ಪೂರೈಕೆಯಾಗುತ್ತಿದೆ. ಆಯಾ ದಿನದ ಕಲ್ಲಿದ್ದಲಿಗೆ ಕಾದುಕೊಂಡಿದ್ದು ಬಳಸಿಕೊಳ್ಳುವಂತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲವಿದ್ಯುತ್‌ನಿಂದಲೇ ನಿರ್ವಹಣೆ: ಇನ್ನು ಕೇಂದ್ರ ವಿದ್ಯುತ್‌ ಗ್ರಿಡ್‌ನಿಂದಲೂ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಕಲ್ಲಿದ್ದಲು ಸಮಸ್ಯೆಯಿಂದ ಸೆಂಟ್ರಲ್‌ ಎಕ್ಸ್‌ಚೇಂಜ್‌ನಲ್ಲೂ ದರ ಭಾರಿ ಹೆಚ್ಚಳ ಕಂಡಿದೆ. ಈ ಹಿಂದೆ ಪ್ರತಿ ಯೂನಿಟ್‌ಗೆ 2-3 ರು. ಇದ್ದ ದರ ಕೆಲ ದಿನಗಳ ಹಿಂದೆ 18 ರು.ವರೆಗೆ ಹೆಚ್ಚಳವಾಗಿತ್ತು. ಈಗಲೂ 11 ರು.ಗಿಂತ ಹೆಚ್ಚು ದರ ಇದೆ. ಖಾಸಗಿ ಕಂಪನಿಗಳಿಂದಲೂ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ರಾಜ್ಯದಲ್ಲಿ 5 ಸಾವಿರ ಮೆ.ವ್ಯಾ. ಸಾಮರ್ಥ್ಯದ ಸೋಲಾರ್‌ ಉತ್ಪಾದನಾ ಘಟಕಗಳಿವೆ. ಅವುಗಳಿಂದ 4 ಸಾವಿರ ಮೆ.ವ್ಯಾ. ವಿದ್ಯುತ್‌ ಲಭ್ಯವಾಗುತ್ತಿದ್ದರೂ ಸಂಜೆ 7 ಗಂಟೆ ಬಳಿಕ ಸೌರ ವಿದ್ಯುತ್‌ ಬಳಕೆಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಜಲ ವಿದ್ಯುತ್‌ನಿಂದಲೇ ನಿರ್ವಹಣೆ ಮಾಡಬೇಕಾಗಿದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಉಂಟಾಗಿರುವ ಉತ್ತಮ ಮಳೆಯಿಂದಾಗಿ ಜಲವಿದ್ಯುತ್‌ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಆದರೆ, ಮಳೆಗಾಲ ಕಳೆದ ಬಳಿಕ ಜಲಾಶಯಗಳಲ್ಲಿ ನೀರಿನ ಅಭಾವ ಸೃಷ್ಟಿಯಾದರೆ ವಿದ್ಯುತ್‌ ಸಮಸ್ಯೆ ಮತ್ತಷ್ಟುಹೆಚ್ಚಾಗಲಿದೆ. ಮಳೆಗಾಲದಲ್ಲೇ ಲೋಡ್‌ಶೆಡ್ಡಿಂಗ್‌ ಭೀತಿ ಉಂಟಾಗಿರುವುದರಿಂದ ಬೇಸಿಗೆ ವೇಳೆಗೆ ಸಮಸ್ಯೆ ಮತ್ತಷ್ಟುತೀವ್ರಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿನ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿನ ಕಲ್ಲಿದ್ದಲು ಶೇಖರಣೆ ಶೂನ್ಯಕ್ಕೆ ಇಳಿದಿದೆ. 23 ಸಾವಿರ ಟನ್‌ ಅಗತ್ಯವಿರುವ ಕಡೆ 14 ಸಾವಿರ ಟನ್‌ ಪೂರೈಕೆಯಾಗುತ್ತಿದೆ. ಹೀಗಿದ್ದರೂ ಜಲವಿದ್ಯುತ್‌ ಹಾಗೂ ಸೌರವಿದ್ಯುತ್‌ನಿಂದ ನಿರ್ವಹಣೆ ಮಾಡುತ್ತಿದ್ದೇವೆ. ಸದ್ಯಕ್ಕೆ ವಿದ್ಯುತ್‌ ಸಮಸ್ಯೆ ಆಗದಂತೆ ಎಚ್ಚರವಹಿಸುತ್ತಿದ್ದೇವೆ.

-ರವಿಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

ಲೋಡ್‌ ಶೆಡ್ಡಿಂಗ್‌ ಮಾಡದಂತೆ ಸಿಎಂ ಸೂಚನೆ

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಹಾಗೂ ಕೇಂದ್ರದಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದರೂ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ಇಲ್ಲದೆ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಕೊಡಬೇಕಿದ್ದ ಕಲ್ಲಿದ್ದಲು ಪೂರೈಕೆಯಾಗದಿರುವುದರಿಂದ ರಾಯಚೂರು ಥರ್ಮಲ… ಘಟಕದಲ್ಲಿ ವಿದ್ಯುತ್‌ ಉತ್ಪಾದನೆ ಕುಂಠಿತವಾಗಿದೆ. ಕೇಂದ್ರದ ವಿದ್ಯುತ್‌ ಗ್ರಿಡ್‌ನಿಂದ ಸಹ ರಾಜ್ಯಕ್ಕೆ ಸಮ ಪ್ರಮಾಣದಲ್ಲಿ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಹೀಗಾಗಿ ಜಲವಿದ್ಯುತ್‌, ಸೌರ ವಿದ್ಯುತ್‌ ಬಳಸಿಕೊಂಡು ಲೋಡ್‌ಶೆಡ್ಡಿಂಗ್‌ ಇಲ್ಲದೆ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.